ಬೆಂಗಳೂರು: ಕಳೆದ ಚುನಾವಣೆಯ ಸೋಲಿನ ಕಹಿ ಘಟನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮರೆತಿಲ್ಲವೆಂದು ಕಾಣುತ್ತಿದ್ದು, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕುಟುಂಬದ ಮನವಿಗೆ ಸಿದ್ದರಾಮಯ್ಯ ಕ್ಯಾರೇ ಎಂದಿಲ್ಲ.
ಹೌದು. ಮಗನ ಗೆಲುವಿಗಾಗಿ ತಮ್ಮ ಕಾಲದ ದಶಕದ ದ್ವೇಷವನ್ನು ಬದಿಗಿಟ್ಟು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದರು. ಮಂಡ್ಯ ಕಾಂಗ್ರೆಸ್ ನಾಯಕರ ಮನವೊಲಿಕೆ ಮಾಡಿ ಅನ್ನೋ ಬೇಡಿಕೆ ಜೊತೆಗೆ ಮಾರ್ಚ್ 25 ರಂದು ಮಂಡ್ಯದಲ್ಲಿನ ನಿಖಿಲ್ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೂ ಬರುವಂತೆ ಸಿದ್ದರಾಮಯ್ಯರ ಬಳಿ ಮನವಿ ಮಾಡಿಕೊಂಡಿದ್ದರು. ಈ ವೇಳೆ ಸಿದ್ದರಾಮಯ್ಯ ಮಂಡ್ಯಕ್ಕೆ ತೆರಳುವ ಭರವಸೆಯನ್ನು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಆದ್ರೆ ಸಿದ್ದರಾಮಯ್ಯ ಅವರು ಇಂದು ಮಂಡ್ಯಕ್ಕೆ ತೆರಳುತ್ತಿಲ್ಲ. ಈ ಮೂಲಕ ಯಾರೆ ಮನೆ ಬಾಗಿಲಿಗೆ ಬಂದ್ರೂ, ಎಷ್ಟೇ ಮೈತ್ರಿ ಅಂದ್ರೂ ಸಿದ್ದರಾಮಯ್ಯ ಮನಸ್ಸಿಗೆ ಎರಡೆರಡು ಬಾರಿ ಆದ ಆ ಗಾಯ ಎಂದಿಗೂ ವಾಸಿ ಆಗಲ್ಲ ಅನ್ನಿಸುತ್ತದೆ. ಅದರ ಪರಿಣಾಮವೇ ದೇವೇಗೌಡರ ಕುಟುಂಬದ ಪ್ರೀತಿ, ಸ್ನೇಹ ಯಾವುದಕ್ಕೂ ಸಿದ್ದರಾಮಯ್ಯ ಕ್ಯಾರೇ ಅನ್ನುತ್ತಿಲ್ಲ ಎನ್ನಲಾಗಿದೆ.
2006 ರಲ್ಲಿ ದೇವೇಗೌಡರ ಜೊತೆಗಿನ ಮುನಿಸಿನಿಂದ ಪಕ್ಷ ತೊರೆದು ಅಹಿಂದ ಕಟ್ಟಿದ ಸಿದ್ದರಾಮಯ್ಯರ ರಾಜಕೀಯ ಜೀವನವೇ ಬಹುತೇಕ ಅಂತ್ಯವಾಗುವ ಅಪಾಯವಿತ್ತು. ಅಹಿಂದ ಅಸ್ತ್ರವನ್ನೇ ಬಳಸಿ ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ ಅಹಿಂದ ಸಿಎಂ ಆಗಿ 5 ವರ್ಷ ಸಿಎಂ ಆಗಿದ್ದು ಇತಿಹಾಸವಾಗಿದೆ.
ಶಾಸಕರಾದ ಅನಿತಾ ಕುಮಾರಸ್ವಾಮಿ ಅವರು ಕಾವೇರಿ ನಿವಾಸದಲ್ಲಿ ಇಂದು ನನ್ನನ್ನು ಭೇಟಿಯಾಗಿ ಮಾತುಕತೆ ನಡೆಸಿದರು. pic.twitter.com/Xjjd1cy3B4
— Siddaramaiah (@siddaramaiah) March 23, 2019
ದೇವೇಗೌಡರ ಕುಟುಂಬದ ಜೊತೆಗಿನ ಸಿಟ್ಟನ್ನ ಮನಸಲ್ಲಿಟ್ಟುಕೊಂಡೆ ಬಂದಿದ್ದ ಸಿದ್ದರಾಮಯ್ಯರ ಗಾಯದ ಮೇಲಿನ ಬರೆ ಎಂಬಂತೆ ಗೌಡರ ಕುಟುಂಬ ಹಠಕ್ಕೆ ಬಿದ್ದು ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರಿಗೆ ಸೋಲಿನ ಬಿಸಿ ಮುಟ್ಟಿಸಿತ್ತು. ಬಳಿಕ ಅನಿವಾರ್ಯವಾಗಿ ಮೈತ್ರಿ ಒಪ್ಪಿಕೊಂಡಿರುವ ಸಿದ್ದರಾಮಯ್ಯರಿಗೆ ಗೌಡರ ಕುಟುಂಬದ ಮೇಲಿನ ಕೋಪವಂತು ಕಡಿಮೆಯಾಗಿಲ್ಲ ಎನ್ನುವುದು ಹಲವು ಸಂದರ್ಭದಲ್ಲಿ ಸಾಬೀತಾಗಿತ್ತು.
ಮಂಡ್ಯದ ಅಖಾಡದಲ್ಲಿ ನಿಖಿಲ್ ಗೆಲುವಿಗೆ ಸಿದ್ದರಾಮಯ್ಯ ನೆರವು ಬೇಕೆ ಬೇಕು ಎಂಬ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಆದರೆ ಇದು ಯಾವುದಕ್ಕೆ ತಲೆ ಕೆಡಿಸಿಕೊಳ್ಳದ ಸಿದ್ದರಾಮಯ್ಯ ಇಂದು ಮಂಡ್ಯಕ್ಕೆ ಹೋಗದೇ ತಮ್ಮ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಈ ಮೂಲಕ ವ್ಯಕ್ತಪಡಿಸಿದ್ದಾರೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.