ಬೆಂಗಳೂರು ಕಂಬಳಕ್ಕೆ 1 ಕೋಟಿ ರೂ. ಘೋಷಿಸಿದ ಸಿಎಂ – ಐಶ್ವರ್ಯಾ ರೈ, ಅನುಷ್ಕಾ ಶೆಟ್ಟಿ ಸಿನಿಸ್ಟಾರ್ಸ್ ಭಾಗಿ

Public TV
2 Min Read
kambala meeting

ಬೆಂಗಳೂರು: ಇದೇ ಪ್ರಥಮ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿರುವ ‘ಬೆಂಗಳೂರು ಕಂಬಳ’ಕ್ಕೆ (Bengaluru Kambala) ಕನಿಷ್ಠ 3 ರಿಂದ 5 ಲಕ್ಷ ಜನರು ಬರುವ ನಿರೀಕ್ಷೆ ಇದ್ದು, ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಬೆಂಗಳೂರು ಕಂಬಳ ಸಮಿತಿ ಗೌರವಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಹೇಳಿದರು.

ನ. 25, 26ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳ ತಯಾರಿ ಸಲುವಾಗಿ ಇಂದು ಬೆಂಗಳೂರಿನ ಬಂಟರ ಸಂಘದಲ್ಲಿ ಕರಾವಳಿಯ ವಿವಿಧ ಜಾತಿ-ಭಾಷಾ ಸಂಘಟನೆಗಳ ಜೊತೆ ನಡೆದ ಬೃಹತ್ ಸಮಾಲೋಚನಾ ಸಭೆ ಬಳಿಕ ಆಯೋಜಿಸಿದ ಬಹಿರಂಗ ಸಮಾವೇಶದಲ್ಲಿ ಅವರು ಈ ವಿಷಯ ತಿಳಿಸಿದರು. ಇದನ್ನೂ ಓದಿ: ಉದ್ಯೋಗದ ಆಸೆಗೆ ಬಿದ್ದು ಕಾಂಬೋಡಿಯಾದಲ್ಲಿ ಸಿಲುಕಿದ್ದ ಕಾಫಿನಾಡಿನ ಯುವಕನ ರಕ್ಷಣೆ

kambala meeting 1

ಇದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಕರಾವಳಿಯ ಸಮಸ್ತ ಸಮುದಾಯದವರು ಒಂದೆಡೆ ಒಗ್ಗಟ್ಟಾಗಿ ಸೇರುವ ಬೃಹತ್ ವೇದಿಕೆ ಇದಾಗಲಿದೆ ಎಂದರು. ಇಂದಿನ ಸಮಾಲೋಚನಾ ಸಭೆಯಲ್ಲಿ ಕರಾವಳಿಯ ವಿವಿಧ ಭಾಷೆ-ಜಾತಿಗಳ 50ಕ್ಕೂ ಅಧಿಕ ಸಂಘಟನೆಗಳು ಭಾಗಿಯಾಗಿದ್ದು ಅವರೊಂದಿಗೆ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದರು.

ಬೆಂಗಳೂರು ಕಂಬಳಕ್ಕೆ ಈಗಾಗಲೇ 150ಕ್ಕೂ ಅಧಿಕ ಕೋಣಗಳ ನೋಂದಣಿ ಆಗಿದ್ದು, ಆ ಎಲ್ಲ ಕೋಣಗಳನ್ನು ನ.23ರಂದು ಉಪ್ಪಿನಂಗಡಿಯಲ್ಲಿ ಬೀಳ್ಕೊಡುಗೆ ಮಾಡಿ ಕಳಿಸಿಕೊಡಲಾಗುವುದು ಎಂದು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ರೈ ತಿಳಿಸಿದರು. ಅಷ್ಟೂ ಕೋಣಗಳನ್ನು ಹಾಸನ ಹಾಗೂ ನೆಲಮಂಗಲದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿಕೊಳ್ಳಲಾಗುವುದು. ಅಲ್ಲದೆ ಪ್ರತಿ ತಾಲೂಕಲ್ಲೂ ಸ್ವಾಗತ-ಬೀಳ್ಕೊಡುಗೆ ಇರಲಿದೆ ಎಂದು ಹೇಳಿದರು. ಇದನ್ನೂ ಓದಿ: ಹೆಣ್ಣುಮರಿಗೆ ಜನ್ಮ ನೀಡಿದ ಸಕ್ರೆಬೈಲಿನ ಭಾನುಮತಿ ಆನೆ

kambala meeting 2

ಬೆಂಗಳೂರು ಕಂಬಳ ಬೆಂಗಳೂರಿನ ಅರಮನೆ ಮೈದಾನದ 70 ಎಕರೆ ಜಾಗದಲ್ಲಿ ನಡೆಯಲಿದೆ ಎಂದು ಸಮಿತಿ ಕಾರ್ಯಾಧ್ಯಕ್ಷ, ಸಂಗೀತ ನಿರ್ದೇಶಕ ಗುರುಕಿರಣ್ ತಿಳಿಸಿದರು. ‘ಬೆಂಗಳೂರು ಕಂಬಳ ನಮ್ಮ ಕಂಬಳ’ ಎಂಬ ಥೀಮ್ ಸಾಂಗ್ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಈ ಥೀಮ್ ಸಾಂಗ್‌ ವಿ.ಮನೋಹರ್ ಸಾಹಿತ್ಯ, ಗುರುಕಿರಣ್ ಸಂಗೀತ ಸಂಯೋಜನೆ, ಮಣಿಕಾಂತ್ ಕದ್ರಿ ಪ್ರೋಗ್ರಾಮಿಂಗ್‌ನಲ್ಲಿ ಮೂಡಿ ಬಂದಿದೆ.

1 ಕೋಟಿ ರೂ. ಘೋಷಿಸಿದ ಸಿಎಂ
ಬೆಂಗಳೂರು ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1 ಕೋಟಿ ರೂ. ಅನುದಾನ ಘೋಷಿಸಿದ್ದಾರೆ ಎಂದು ಕಂಬಳ ಸಮಿತಿ ಉಪಾಧ್ಯಕ್ಷ ಗುಣರಂಜನ್ ಶೆಟ್ಟಿ ತಿಳಿಸಿದ್ದಾರೆ.

ತಾರಾಕಳೆ: ಬೆಂಗಳೂರು ಕಂಬಳಕ್ಕೆ ಬಾಲಿವುಡ್ ನಟಿ ಐಶ್ವರ್ಯಾ ರೈ, ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಸೇರಿದಂತೆ ವಿವಿಧ ಚಿತ್ರರಂಗಗಳಲ್ಲಿ ಇರುವ ಕರಾವಳಿ ಮೂಲದ ಸಿನಿಮಾತಾರೆಯರು ಆಗಮಿಸಲಿದ್ದಾರೆ ಎಂದು ಸಮಿತಿ ಸಂಘಟನಾ ಅಧ್ಯಕ್ಷ ಉಮೇಶ್ ಶೆಟ್ಟಿ ತಿಳಿಸಿದ್ದಾರೆ. ಬೆಂಗಳೂರು ಕಂಬಳಕ್ಕೆ ಆಭರಣ ಜುವೆಲ್ಲರ್ಸ್ ಅವರು ಶೀರ್ಷಿಕೆ ಪ್ರಾಯೋಜಕರಾಗಿದ್ದು, ಆಭರಣ ಜುವೆಲ್ಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು.

Share This Article