ಬೆಂಗಳೂರು: ಸ್ವಯಂ ಘೋಷಿತ ದೇವಮಾನವ ಕಲ್ಕಿ ಆಶ್ರಮ, ಶಿಕ್ಷಣ ಸಂಸ್ಥೆ ಮೇಲೆ ಸತತ ಮೂರನೇ ದಿನವೂ ಐಟಿ ದಾಳಿ ಮುಂದುವರಿದಿದೆ. ಇಂದು ಬೆಂಗಳೂರಿನ ದೊಮ್ಮಲೂರು ಬಳಿಯಿರುವ ಒನ್ ನೆಸ್ ಕಚೇರಿ ಮೇಲೆ ಐಟಿ ರೇಡ್ ನಡೆದಿದ್ದು, ಶೋಧ ಕಾರ್ಯ ಇನ್ನೂ ಮುಂದುವರಿದಿದೆ.
ಇದುವರೆಗೆ ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕದಲ್ಲಿರುವ ಕಲ್ಕಿಯ 40ಕ್ಕೂ ಹೆಚ್ಚು ಆಸ್ತಿಗಳ ಮೇಲೆ ದಾಳಿ ನಡೆದಿದೆ. ಒನ್‍ನೆಸ್, ವೆಲ್‍ನೆಸ್ ಸಮೂಹದ ಎಲ್ಲ ಕಂಪನಿಗಳನ್ನು ಜಾಲಾಡಲಾಗುತ್ತಿದೆ. ಇದುವರೆಗೆ ಅಘೋಷಿತ ಆಸ್ತಿ ಪತ್ರಗಳು, ವಜ್ರವೈಢೂರ್ಯ, ಅಪಾರ ಪ್ರಮಾಣದ ನೋಟಿನ ಕಂತೆಗಳು ಸೇರಿ ಬರೋಬ್ಬರಿ 112 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂಬ ಮಾಹಿತಿ ಲಭಿಸಿದೆ. ಆಂಧ್ರದ ವರದಯ್ಯಪಾಳ್ಯಂನ ಆಶ್ರಮದಿಂದ ಕದ್ದು ಮುಚ್ಚಿ ಸಾಗಿಸುತ್ತಿದ್ದ 45 ಕೋಟಿ ರೂ. ನಗದನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕಲ್ಕಿ ಭಗವಾನ್ ಪುತ್ರ ಕೃಷ್ಣಾ ವಿವಿಧ ಉದ್ಯಮಗಳಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು ಲೆಕ್ಕ ಪತ್ರದಲ್ಲಿ ಗೋಲ್‍ಮಾಲ್ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಐಟಿ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಅಲ್ಲದೇ ತೆರಿಗೆ ವಂಚನೆ ಹಾಗೂ ಅಕ್ರಮ ಆಸ್ತಿ ಸಂಪಾದನೆ ಹಾಗೂ ವಿದೇಶಿ ಭಕ್ತರ ಹೆಸರಿನ ಮೇಲೆ ಭಾರೀ ಮೊತ್ತದಲ್ಲಿ ನಗದನ್ನು ವಿದೇಶಕ್ಕೆ ರವಾನೆ ಮಾಡಿದ ಆರೋಪ ಕೂಡ ಕೇಳಿ ಬಂದಿದೆ.
ಎಲ್‍ಐಸಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ಆಂಧ್ರಪ್ರದೇಶ ಮೂಲದ ವಿಜಯ್‍ಕುಮಾರ್ ನಾಯ್ಡು ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಬೆಂಗಳೂರಿನ ಶಾಲೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ನಂತರ ಅಲ್ಲಿಂದಲೂ ಹೊರಬಿದ್ದು ಚಿತ್ತೂರಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದ. 1989ರಲ್ಲಿ ಶಿಕ್ಷಣ ಸಂಸ್ಥೆಗಳು ನಷ್ಟ ಅನುಭವಿಸಿದ ಬಳಿಕ ಕೆಲ ವರ್ಷ ಭೂಗತನಾಗಿದ್ದ ವಿಜಯ್‍ಕುಮಾರ್ ದಿಢೀರ್ ಸ್ವಾಮಿ ವೇಷದಲ್ಲಿ ಪ್ರತ್ರ್ಯಕ್ಷನಾಗಿ,” ನಾನು ವಿಷ್ಣುವಿನ 10ನೇ ಅವತಾರ. ನಾನು ಕಲ್ಕಿ ಭಗವಾನ್” ಎಂದು ಘೋಷಿಸಿಕೊಂಡಿದ್ದ.
ನನ್ನ ಪತ್ನಿಯೂ ದೇವರ ಅವತಾರ ಎಂದು ಘೋಷಿಸಿಕೊಂಡಿದ್ದ. ಕೆಲ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ದುಡ್ಡುಕೊಟ್ಟಂತೆ ಇವರ ಸಾಮಾನ್ಯ ದರ್ಶನಕ್ಕೆ ಭಕ್ತರು 5 ಸಾವಿರ ರೂ. ಮತ್ತು ವಿಶೇಷ ದರ್ಶನಕ್ಕೆ 25 ಸಾವಿರ ರೂ. ಪಾವತಿಸಬೇಕಿತ್ತು. ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹಲವು ಕಡೆ ಆಶ್ರಮ ಕಡೆ ಸ್ಥಾಪಿಸಿದ್ದ. ಈತನಿಗೆ ಅನಿವಾಸಿ ಭಾರತೀಯರು ಮತ್ತು ದೊಡ್ಡ ದೊಡ್ಡ ಉದ್ಯಮಿಗಳು ಭಕ್ತರಿದ್ದಾರೆ. ಭಕ್ತರು ಆಶ್ರಮಕ್ಕೆ ನೀಡಿದ ದೇಣಿಗೆ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗಿದೆ. ಭಾರೀ ತೆರಿಗೆ ವಂಚನೆ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.