ಬೆಂಗಳೂರು: ಸತತ ಸೋಲುಗಳಿಂದ ಕಂಗೆಟ್ಟಿರೋ ಜೆಡಿಎಸ್ ಮುಂಬರುವ ವಿಧಾನಸಭೆ ಚುನಾವಣೆ ಗೆಲುವು ಸಾಧಿಸಲು ಹೊಸ ಅಸ್ತ್ರದೊಂದಿಗೆ ಹೊಸ ಹೆಜ್ಜೆ ಇಡಲು ಪ್ಲಾನ್ ಮಾಡಿದೆ. 2023ರ ಚುನಾವಣೆಯಲ್ಲಿ ಪೂರ್ಣ ಬಹುಮತದಿಂದ ಅಧಿಕಾರದ ಗದ್ದುಗೆ ಹಿಡಿಯಲು ಚುನಾವಣೆ ರಣತಂತ್ರಗಳ ನಿಪುಣ ಪ್ರಶಾಂತ್ ಕಿಶೋರ್ ಮೊರೆ ಹೋಗಿದೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವು, 2019ರಲ್ಲಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಗೆಲುವು ಸೇರಿದಂತೆ ಹಲವು ಚುನಾವಣೆಗಳಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ಭರ್ಜರಿ ಯಶಸ್ಸು ಕಂಡಿತ್ತು. ಈ ಯಶಸ್ಸಿನಿಂದ ಆಕರ್ಷಿತರಾಗಿರೋ ಮಾಜಿ ಸಿಎಂ ಕುಮಾರಸ್ವಾಮಿ ಖುದ್ದು ಪ್ರಶಾಂತ್ ಕಿಶೋರ್ ಜೊತೆ 2023ರ ಚುನಾವಣೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈಗಾಗಲೇ ಒಂದು ಸುತ್ತಿನ ಮಾತುಕತೆಯಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ 2023ರ ಚುನಾವಣೆಯಲ್ಲಿ ಜೆಡಿಎಸ್‍ಗೆ ಪ್ರಶಾಂತ್ ಕಿಶೋರ್ ಚುನಾವಣೆ ರಣತಂತ್ರ ಕೈಜೋಡಿಸಲಿದೆ. ಇದನ್ನೂ ಓದಿ: ‘ಗೆಲ್ಲುವ ಕುದುರೆ’ಯ ಅಗತ್ಯ ನಮಗಿಲ್ಲ, ಚುನಾವಣೆಯ ತಂತ್ರಗಾರಿಕೆ ನಮಗೂ ಗೊತ್ತು
ಪ್ರಶಾಂತ್ ಕಿಶೋರ್ ಜೊತೆ ಮಾತುಕತೆ ನಡೆಸಿರುವ ಬಗ್ಗೆ ಸ್ವತಃ ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತಾನಾಡಿದ ಅವರು, ಪ್ರಶಾಂತ್ ಕಿಶೋರ್ ಜೊತೆ ಪ್ರಾಥಮಿಕ ಹಂತದ ಮಾತುಕತೆ ನಡೆದಿದೆ. ಚುನಾವಣೆಗೆ ತುಂಬ ಸಮಯ ಇದೆ. ಮತ್ತೊಂದು ಬಾರಿ ಚರ್ಚೆ ಮಾಡಿ 2023ರ ಚುನಾವಣೆಗೆ ಬಳಸಿಕೊಳ್ಳುವ ಬಗ್ಗೆ ನಿರ್ಧಾರ ಮಾಡೋದಾಗಿ ತಿಳಿಸಿದ್ದಾರೆ.