ಬೆಂಗಳೂರು: ಹೊಸೂರು ಮುಖ್ಯ ರಸ್ತೆಯ ಸರ್ಜಾಪುರ ಜಂಕ್ಷನ್ ಬಳಿ ನೂತನವಾಗಿ ನಿರ್ಮಾಣವಾದ ಸ್ಕೈವಾಕ್‍ಗೆ ಮೇಯರ್ ಗೌತಮ್ ಕುಮಾರ್, ಸ್ಥಳೀಯ ಶಾಸಕ ರಾಮಲಿಂಗಾರೆಡ್ಡಿ ಹಾಗೂ ಸಂಸದ ತೇಜಸ್ವಿ ಸೂರ್ಯ ಚಾಲನೆ ನೀಡಿದರು.
ಬಿಬಿಎಂಪಿ ವತಿಯಿಂದ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಹೊಸೂರು ಮುಖ್ಯ ರಸ್ತೆಯ ಸರ್ಜಾಪುರ ಜಂಕ್ಷನ್ ಬಳಿ ನೂತನವಾಗಿ ಸ್ಕೈವಾಕ್ ನಿರ್ಮಿಸಲಾಗಿದೆ. ಹೊಸೂರು ಮುಖ್ಯರಸ್ತೆ ಸರ್ಜಾಪುರ ಜಂಕ್ಷನ್‍ನಲ್ಲಿ ಪಾದಚಾರಿ ಮೇಲ್ಸೇತುವೆಗೆ ಬಹಳ ದಿನಗಳಿಂದ ಬೇಡಿಕೆ ಇತ್ತು. ಸ್ಥಳೀಯರ ಮನವಿ ಮೇರೆಗೆ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗಲು ಖಾಸಗೀ ಸಂಸ್ಥೆಯ ಸಹಭಾಗಿತ್ವದಲ್ಲಿ ಸುಸಜ್ಜಿತ ಸ್ಕೈವಾಕ್ ನಿರ್ಮಾಣ ಮಾಡಲಾಗಿದೆ.
ವಿನೂತನ ರೀತಿಯಲ್ಲಿ ಸ್ಕೈವಾಕ್ ಅನ್ನು ನಿರ್ಮಿಸಿದ್ದು, ಸಿಸಿಟಿವಿ ಕ್ಯಾಮೆರಾ, ಎರಡೂ ಬದಿಯಲ್ಲಿ ಲಿಫ್ಟ್, ಸಾರ್ವಜನಿಕರು ರಾತ್ರಿ ವೇಳೆ ಸುರಕ್ಷಿತವಾಗಿ ತೆರಳಲು ಎಲ್‍ಇಡಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ ಎಂದು ಉದ್ಘಾಟನೆ ಬಳಿಕ ಮೇಯರ್ ಗೌತಮ್ ಕುಮಾರ್ ತಿಳಿಸಿದರು.