ಬೆಂಗಳೂರು: ಯಾವುದೇ ಸರ್ಕಾರ ಬಂದರೂ ಪೊಲೀಸರಿಗೆ ಯಾವುದೇ ಪ್ರಯೋಜನವಿಲ್ಲ. ಸರ್ಕಾರ ಬದಲಾಗುತ್ತಿದೆ ಹೊರತು ಪೊಲೀಸರ ವೇತನ ಮಾತ್ರ ಹೆಚ್ಚಾಗುತ್ತಿಲ್ಲ.
ಪೊಲೀಸರ ವೇತನ ಹೆಚ್ಚಳಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಓಕೆ ಅಂದಿದ್ದರು. ಆದರೆ ಹಾಲಿ ಸಿಎಂ ಯಡಿಯೂರಪ್ಪ ಇಲ್ಲ ಎಂದು ಹೇಳುತ್ತಿದ್ದಾರೆ. ಪೊಲೀಸರಿಗೆ ಮೈತ್ರಿ ಸರ್ಕಾರದ ಅಂತ್ಯದಲ್ಲಿ ಕುಮಾರಸ್ವಾಮಿ ಗಿಫ್ಟ್ ಕೊಟ್ಟು ಹೋದರು. ಆದರೆ ಕುಮಾರಸ್ವಾಮಿ ಕೊಟ್ಟ ಗಿಫ್ಟ್‍ಗೆ ಯಡಿಯೂರಪ್ಪ ಬ್ರೇಕ್ ಹಾಕಿದ್ದಾರೆ.
Advertisement
Advertisement
ಎಚ್.ಡಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ವೇತನ ಹೆಚ್ಚಳಕ್ಕೆ ಆದೇಶ ಮಾಡಿದ್ದರು. ರಾಘವೇಂದ್ರ ಔರಾದ್ಕರ್ ವರದಿಯಂತೆ ಶೇ.12.30 ರಷ್ಟು ವೇತನ ಹೆಚ್ಚಳಕ್ಕೆ ಕುಮಾರಸ್ವಾಮಿ ಅಧಿಸೂಚನೆ ಹೊರಡಿಸಿದ್ದರು. ಕಳೆದ ಆಗಸ್ಟ್ 1 ರಿಂದಲೇ ಅನ್ವಯವಾಗುವಂತೆ ವೆತನ ಹೆಚ್ಚಳ ಮಾಡಬೇಕು ಎಂದು ಆದೇಶ ಹೊರಡಿಸಿದ್ದರು. ಆದರೆ ಸಿಎಂ, ಸರ್ಕಾರ ಎರಡೂ ಬದಲಾದರೂ ಪೊಲೀಸರಿಗೆ ಮಾತ್ರ ವೇತನ ಹೆಚ್ಚಳ ಭಾಗ್ಯ ಸಿಕ್ಕಿಲ್ಲ.
Advertisement
ಆಗಸ್ಟ್ ನಲ್ಲೂ ಇಲ್ಲ, ಸೆಪ್ಟೆಂಬರ್ ನಲ್ಲೂ ಸರ್ಕಾರ ವೇತನ ಹೆಚ್ಚಿಸಿಲ್ಲ. ವೇತನ ಹೆಚ್ಚಳಕ್ಕೆ ಸರ್ಕಾರದಲ್ಲಿ ಹಣ ಇಲ್ಲವಂತೆ. ಪೊಲೀಸರ ವೇತನ ಹೆಚ್ಚಳಕ್ಕೆ 600 ಕೋಟಿ ರೂ. ಬೇಕಾಗುತ್ತದೆಯಂತೆ. ಇತ್ತ ಪೊಲೀಸರು ಮಾತ್ರ ಯಾವಾಗ ವೇತನ ಹೆಚ್ಚಳ ಆಗುತ್ತದೆ ಎಂದು ಕಾದು ಕುಳಿತಿದ್ದಾರೆ.
Advertisement
ಗೌರಿ – ಗಣೇಶ ಹಬ್ಬಕ್ಕೂ ವೇತನ ಹೆಚ್ಚಳ ಆಗಿಲ್ಲವೆಂದು ಪೊಲೀಸರು ಬೇಸರಗೊಂಡಿದ್ದಾರೆ. ಒಟ್ಟಿನಲ್ಲಿ ಸರ್ಕಾರಿ ಆದೇಶ ಮಾಡಿದರೂ ಪೊಲೀಸರ ವೇತನ ಹೆಚ್ಚಳ ಆಗ್ಲಿಲ್ಲ ಯಾಕೆ ಎಂಬ ಪ್ರಶ್ನೆ ಎದ್ದಿದ್ದು, ಸರ್ಕಾರ ಅರ್ಥಿಕ ಸಂಕಷ್ಟಕ್ಕೆ ಸಿಕ್ಕಿಕೊಂಡಿದೆಯಾ, ಕಿಸಾನ್ ಸಮ್ಮಾನ್ ಯೋಜನೆ, ನೇಕಾರರು, ಮೀನುಗಾರರ ಸಾಲ ಮನ್ನಾದಿಂದ ಹಣಕಾಸು ಸಮಸ್ಯೆ ಎದುರಾಗಿದೆಯಾ ಅಥವಾ ಸಾಲಮನ್ನಾ ಹಿನ್ನೆಲೆಯಲ್ಲಿ ಪೊಲೀಸರ ವೇತನ ಹೆಚ್ಚಳಕ್ಕೆ ಕತ್ತರಿ ಬಿದ್ದಿದೆಯಾ ಅನ್ನೋ ಪ್ರಶ್ನೆಗಳು ಕಾಡುತ್ತಿದೆ.