ಬೆಂಗಳೂರು: ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ನಲ್ಲಿ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹುಡುಗಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಪತಾಕೆಯನ್ನು ಹಾರಿಸಿದ್ದಾರೆ.
ಆನೇಕಲ್ ತಾಲೂಕಿನ ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಸೋಲೂರೂ ಗ್ರಾಮದ ನಿವಾಸಿಗಳಾದ ಗುರುಮೂರ್ತಿ ಮತ್ತು ವನಜಾಕ್ಷಿ ದಂಪತಿಯ ಪುತ್ರಿ ಶಾಲಿನಿ ಚಿನ್ನ ಗೆದ್ದ ಹುಡುಗಿ. ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಶಾಲಿನಿ ಬುಧವಾರ ನಡೆದ 63 ಕೆಜಿ ವಿಭಾಗದ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ನಲ್ಲಿ ಮೊದಲ ಸ್ಥಾನಗಳಿಸಿ ಶಾಲಿನಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಮಗಳು ಚಿನ್ನದ ಪದಕ ಗೆಲ್ಲುತ್ತಿದ್ದಂತೆ ಪೋಷಕರ ಹರ್ಷ ಮುಗಿಲು ಮುಟ್ಟಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ತುಂಬಿಕೊಂಡಿದೆ. ಶಾಲಿನಿ ತಂದೆ ತಾಯಿ ಹಾಗೂ ಸಹೋದರ ಪರಸ್ಪರ ಸಿಹಿ ತಿನಿಸುವ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ. ಶಾಲಿನಿ ವಿಡಿಯೋ ಕಾಲ್ ಮಾಡುವ ಮೂಲಕ ಪೋಷಕರೊಂದಿಗೆ ಹರ್ಷ ಹಂಚಿಕೊಂಡು ತನ್ನ ಸಾಧನೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.
ಬಡತನದಲ್ಲಿ ಬೆಳೆದಿದ್ದ ಶಾಲಿನಿಯ ಪ್ರತಿಭೆಯನ್ನು ಗುರುತಿಸಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಈಕೆಗೆ ಉಚಿತ ಶಿಕ್ಷಣ ಮತ್ತು ತರಬೇತಿ ನೀಡುತ್ತಿತ್ತು. ಇದೇ ಸಂದರ್ಭದಲ್ಲಿ ಶಾಲಿನಿ ತಂದೆ ಮಾತನಾಡಿ, ಶಾಲಿನಿಯ ಸಾಧನೆಯಿಂದ ತನ್ನ ಜನ್ಮ ಸಾರ್ಥಕವಾಗಿದೆ ಎಂದು ಆಕೆಯ ಬೆಳವಣಿಗೆಗೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv