ಬೆಂಗಳೂರು: ಭಾರತ ಮಿಲಿಟರಿಗೆ ಸಂಬಂಧಿಸಿದ ವಸ್ತುಗಳನ್ನು ಆಮದು ಮಾಡಿಕೊಳ್ಳುವುದು ಹೆಚ್ಚು. ಆದರೆ ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ಈಗ ದೇಶದಲ್ಲಿ ರಕ್ಷಣಾ ಉತ್ಪಾದನೆ ಮಾಡುವ ಖಾಸಗಿ ಫ್ಯಾಕ್ಟರಿಗಳು ಆರಂಭಗೊಂಡಿದ್ದು ಆದರಲ್ಲೂ ಬೆಂಗಳೂರಿನ ಕಂಪನಿಯೊಂದು ಎರಡು ಸ್ನೈಪರ್ಸ್ ಗನ್ ಗಳನ್ನು ಅಭಿವೃದ್ಧಿ ಪಡಿಸಿದೆ.
ಬೆಂಗಳೂರಿನ ಕೋರಮಂಗಲ ಮೂಲದ ಎಸ್‍ಎಸ್‍ಎಸ್ ಡಿಫೆನ್ಸ್ ಕಂಪನಿ ಸ್ವದೇಶಿ ಎರಡು ಸ್ನೈಪರ್ ರೈಫಲ್ ಗಳನ್ನು ಅಭಿವೃದ್ಧಿ ಪಡಿಸಿದೆ. ಶೀಘ್ರವೇ ಈ ಕಂಪನಿ ರೈಫಲ್ ಗಳು ಸೇನೆ ಪ್ರಾಯೋಗಿಕವಾಗಿ ಬಳಸಿಕೊಳ್ಳಲಿದೆ.
ಜಿಗಣಿಯಲ್ಲಿ 80 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿರುವ ಜಾಗದಲ್ಲಿ ಕಂಪನಿ ಫ್ಯಾಕ್ಟರಿ ತೆರೆದಿದೆ. ಭಾರತೀಯ ಸೇನೆಯ ಜೊತೆ ವಿದೇಶಕ್ಕೂ ರೈಫಲ್ ಗಳನ್ನು ರಫ್ತು ಮಾಡಲು ಈಗ ಕಂಪನಿ ಮುಂದಾಗಿದೆ.
ಈ ಸಂಬಂಧ ಖಾಸಗಿ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಎಸ್‍ಎಸ್‍ಎಸ್ ಡಿಫೆನ್ಸ್ ಕಂಪನಿಯ ಸಿಇಒ ವಿವೇಕ್ ಕೃಷ್ಣನ್, ಭಾರತದಲ್ಲಿ ಮೊದಲ ಬಾರಿಗೆ ನಾವು ಸ್ವದೇಶಿ ಸ್ನೈಪರ್ಸ್ ರೈಫಲ್ಸ್ ಗಳನ್ನು ಅಭಿವೃದ್ಧಿ ಪಡಿಸಿದ್ದೇವೆ. ವಿದೇಶದಿಂದ ತಂತ್ರಜ್ಞಾನವನ್ನು ಆಮದು ಮಾಡಿ ನಾವು ಇಲ್ಲಿ ಜೋಡಣೆ ಮಾಡಿಲ್ಲ. ಮದ್ದುಗುಂಡುಗಳು ಜೊತೆ ರೈಫಲ್ಸ್ ಗೆ ಬೇಕಾದ ಎಲ್ಲ ಸಾಮಾಗ್ರಿಗಳನ್ನು ನಾವೇ ಅಭಿವೃದ್ಧಿ ಪಡಿಸಿದ್ದೇವೆ. ಇಲ್ಲಿಯವರೆಗೆ ನಮ್ಮ ಸೇನೆ ಈ ಸಾಮಾಗ್ರಿಗಳನ್ನು ವಿವಿಧ ಕಂಪನಿಗಳಿಂದ ಖರೀದಿಸುತಿತ್ತು ಎಂದು ತಿಳಿಸಿದ್ದಾರೆ. ಇದನ್ನು ಓದಿ: ಭಾರತದಲ್ಲಿ ತಯಾರಾಗಲಿದೆ ಎಕೆ-203 ರೈಫಲ್? ವಿಶೇಷತೆ ಏನು? ಅಗತ್ಯ ಏನು? – ಇಲ್ಲಿದೆ ಪೂರ್ಣ ಮಾಹಿತಿ
2014ರಲ್ಲಿ ಮೋದಿ ಸರ್ಕಾರ ಬಂದ ನಂತರ ಭಾರತದಲ್ಲಿ ಮೊದಲ ಬಾರಿಗೆ ಆಯುಧ ತಯಾರಿಸುವ ಕಂಪನಿಗಳು ಆರಂಭಗೊಂಡಿತು. ಈಗಾಗಲೇ ಕೆಲವು ಕಂಪನಿಗಳು ವಿದೇಶಿ ಕಂಪನಿಗಳ ಜೊತೆ ಮಾತುಕತೆ ನಡೆಸಿ ಹಕ್ಕುಗಳನ್ನು ಪಡೆದು ಆಯುಧಗಳನ್ನು ನಿರ್ಮಿಸುತ್ತಿದೆ. ಆದರೆ ಇಲ್ಲಿಯವರೆಗೆ ಸ್ನೈಪರ್ಸ್ ರೈಫಲ್ ತಯಾರಿಸಿದ ಬಗ್ಗೆ ಯಾವುದೇ ಕಂಪನಿ ಘೋಷಣೆ ಮಾಡಿಲ್ಲ.
ಭಾರತೀಯ ಸೇನೆ ಸ್ನೈಪರ್ ರೈಫಲ್ ಗಳನ್ನು ಖರೀದಿಸಲು ಮುಂದಾಗುತ್ತಿದೆ. ಕಳೆದ ಬಾರಿ 20 ಕಂಪನಿಗಳು ಟೆಂಡರ್ ನಲ್ಲಿ ಭಾಗವಹಿಸಿತ್ತು. ಆದರೆ ಯಾವೊಂದು ಕಂಪನಿಗಳು ಗನ್ ಜೊತೆ ಬೇಕಾದ ಎಲ್ಲ ಸಾಮಾಗ್ರಿಗಳನ್ನು(ಮದ್ದು ಗುಂಡುಗಳು, ಗನ್ ಪೌಡರ್) ನೀಡಲು ಒಪ್ಪದ ಪರಿಣಾಮ ಇನ್ನೂ ಸ್ನೈಪರ್ ರೈಫಲ್ ಗಳು ಭಾರತ ಸೇನೆಯ ಬತ್ತಳಿಕೆಯನ್ನು ಸೇರಿಲ್ಲ.
ಎಸ್‍ಎಸ್‍ಎಸ್ ಡಿಫೆನ್ಸ್ ಎರಡು ರೈಫಲ್ ಗಳನ್ನು ಅಭಿವೃದ್ಧಿ ಪಡಿಸಿದೆ. ‘ವೈಪರ್’ .308/7.62*51 ಮಿ.ಮೀ ಕಾಟ್ರಿಡ್ಜ್ ಹೊಂದಿದ್ದರೆ ‘ಸಬರ್’ .338 ಲಪುವಾ ಮ್ಯಾಗ್ನಂ ಕಾಟ್ರಿಡ್ಜ್ ಹೊಂದಿದೆ.
ವೈಪರ್ 1 ಕಿ.ಮೀ ದೂರದ ಗುರಿಯನ್ನು ನಿಖರವಾಗಿ ಭೇದಿಸುವ ಸಾಮರ್ಥ್ಯ ಹೊಂದಿದ್ದರೆ, ಸಬರ್ 1.5 ಕಿ.ಮೀ ದೂರದ ಗುರಿಯನ್ನು ಹೊಡೆಯುವ ಸಾಮರ್ಥ್ಯ ಹೊಂದಿದೆ. ರೈಫಲ್ ನಿಖರತೆಯನ್ನು ಅಳೆಯುವ ಮಿನಿಟ್ ಆಫ್ ಆಂಗಲ್ ನಲ್ಲೂ ವಿಶ್ವದರ್ಜೆಗೆ ಹೋಲಿಸಿದರೆ ನಮ್ಮದು ಶ್ರೇಷ್ಠವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
7.6251 ಮಿ.ಮೀ ಮತ್ತು .338 ಲಾಪುವಾ ಮ್ಯಾಗ್ನಂ ಕ್ಯಾಲಿಬರ್ ರೈಫಲ್ ಗಳನ್ನು ವಿಶ್ವದ ಮಿಲಿಟರಿಯಲ್ಲಿ ಬಳಕೆ ಮಾಡುತ್ತಾರೆ ಎಂದು ಎಸ್‍ಎಸ್‍ಎ ಡಿಫೆನ್ಸ್ ಆಡಳಿತ ನಿರ್ದೇಶಕ ಸತೀಶ್. ಆರ್ ಹೇಳಿದ್ದಾರೆ.
ಕಂಪನಿ 20 ಕೋಟಿ ರೂ. ಹೂಡಿಕೆ ಮಾಡಿ ಜಿಗಣಿಯಲ್ಲಿ 80 ಸಾವಿರ ಚದರ ಅಡಿ ಜಾಗದಲ್ಲಿ ಫ್ಯಾಕ್ಟರಿ ನಿರ್ಮಾಣಗೊಂಡಿದ್ದು ವಾರ್ಷಿಕವಾಗಿ 15 ಸಾವಿರ ಆಯುಧಗಳನ್ನು ತಯಾರಿಸಲು ಗುರಿಯನ್ನು ಹಾಕಿಕೊಳ್ಳಲಾಗಿದೆ. ಬೆಂಗಳೂರು ಅಲ್ಲದೇ ಆಂಧ್ರಪ್ರದೇಶದ ಅನಂತಪುರದಲ್ಲಿ 80 ಎಕ್ರೆ ಜಾಗವನ್ನು ಕಂಪನಿ ಖರೀದಿಸಿದೆ.