ಬೆಂಗಳೂರು: ವಶೀಕರಣದ ನೆಪದಲ್ಲಿ ನಕಲಿ ಜ್ಯೋತಿಷಿಯೊಬ್ಬ ದಂಪತಿ ಬಳಿ ಚಿನ್ನಾಭರಣ ದೋಚಿ ಕಿರುಕುಳ ನೀಡಿದ ಕಾರಣ ದಂಪತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಕೊಟ್ಟಿಗೆಪಾಳ್ಯದಲ್ಲಿ ನಡೆದಿದೆ.
ರಘು(35) ಹಾಗೂ ಸುಜಾತ(22) ಆತ್ಮಹತ್ಯೆಗೆ ಯತ್ನಿಸಿದ ದಂಪತಿ. ಪ್ರಸ್ತುತ ದಂಪತಿಗಳು ಮಂಡ್ಯದ ಬೆಳ್ಳೂರು ಕ್ರಾಸ್‍ನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
8 ತಿಂಗಳ ಹಿಂದೆ ದಂಪತಿ ಅನಾರೋಗ್ಯದ ಕಾರಣ ಪಂಡಿತ ಚಂದ್ರಶೇಖರ್ ಸ್ವಾಮೀಜಿ ಬಳಿ ತೆರಳಿದ್ದಾರೆ. ಈ ವೇಳೆ ದಂಪತಿ ಬಳಿ ಸುಮಾರು 1.80 ಲಕ್ಷ ಹಣ ಪಡೆದು ಆರೋಗ್ಯ ಸಮಸ್ಯೆಗೆ ಪರಿಹಾರ ನೀಡುವುದಾಗಿ ತಿಳಿಸಿದ್ದಾನೆ. ಅನಂತರ ಮನೆಯಲ್ಲಿರುವ ಚಿನ್ನಾಭರಣ ನೀಡಿದರೆ ಪೂಜೆ ನಡೆಸಿಕೊಡುವುದಾಗಿ ತಿಳಿಸಿದ್ದಾನೆ. ಆದರೆ ಚಿನ್ನದ ಒಡವೆ ಕೊಟ್ಟ ಬಳಿಕ ಸಾಮೀಜಿ ಅವುಗಳನ್ನು ಹಿಂದಿರುಗಿಸದೆ, ನೀವು ನನಗೆ ಒಡವೆ ಕೊಟ್ಟೇ ಇಲ್ಲ ಎಂದು ಹೇಳಿದ್ದಾನೆ.
ತನಗೆ ನೀಡಿರುವ ಹಣ, ಒಡವೆ ಕುರಿತು ಬೇರೆಡೆ ತಿಳಿಸಿದರೆ ನಿಮಗೇ ತೊಂದರೆಯಾಗುತ್ತದೆ ಎಂದು ನಕಲಿ ಸ್ವಾಮೀಜಿ ಬೆದರಿಕೆ ಹಾಕಿದ್ದಾನೆ. ಇದರಿಂದ ಮಾನಸಿಕವಾಗಿ ನೊಂದ ದಂಪತಿ ನಗರದಿಂದ ಹೊರ ತೆರಳಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ದಂಪತಿಯನ್ನು ಕಂಡ ಸ್ಥಳೀಯರು ಇಬ್ಬರನ್ನು ಮಂಡ್ಯದ ಬೆಳ್ಳೂರು ಕ್ರಾಸ್‍ನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಸ್ತುತ ಇಬ್ಬರ ಪರಿಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಲಗ್ಗೆರೆಯ ಪಾರ್ವತಿ ನಗರದಲ್ಲಿರುವ ಚಂದ್ರಶೇಖರ್ ಸ್ವಾಮಿಜಿ ತನ್ನ ಕಚೇರಿಯಿಂದ ಪರಾರಿಯಾಗಿದ್ದಾನೆ. ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ನಕಲಿ ಸ್ವಾಮೀಜಿ ವಿರುದ್ಧ ದೂರು ದಾಖಲಾಗಿದೆ.
https://www.youtube.com/watch?v=vTu9lCFwsQs