– ಬಿಜೆಪಿಯವ್ರ ಜೊತೆ 20 ಅಲ್ಲ, 78 ಶಾಸಕರು ಇದ್ದೇವೆ
ಬೆಂಗಳೂರು: ರಮೇಶ್ ಜಾರಕಿಹೊಳಿ ಅವರಿಗೆ ಪಕ್ಷವು ಶಾಸಕ, ಸಚಿವ ಸ್ಥಾನ ಸೇರಿದಂತೆ ಎಲ್ಲವನ್ನೂ ನೀಡಿದೆ. ಆದರೂ ಯಾಕೆ ಉಸಿರುಕಟ್ಟುವಂತೆ ಆಗಿದೆ ಎನ್ನುತ್ತಾರೆ ಅಂತ ತಿಳಿಯುತ್ತಿಲ್ಲ. ಭಗವಂತ ಅವರ ಆಸೆ ಈಡೇರಿಸಲಿ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.
ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಯ ಹೇಳಿಕೆಯ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು, ಪಕ್ಷದಲ್ಲಿ ನಾಯಕರಿದ್ದಾರೆ. ಅವರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾಜಿ ಸಚಿವರ ಜೊತೆಗೆ ಮಾತನಾಡುತ್ತಾರೆ. ಅವರು ನನಗೆ ಭೇಟಿಯಾದರೆ ಮನವೊಲಿಸೋಕೆ ಸಾಧ್ಯ. ಸಿಕ್ಕರೆ ನಾನು ಅವರ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು. ಇದನ್ನು ಓದಿ: ಸತೀಶ್ ಜಾರಕಿಹೊಳಿ ಗೋಮುಖ ವ್ಯಾಘ್ರ: ರಮೇಶ್ ಜಾರಕಿಹೊಳಿ
20 ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಬಿಜೆಪಿಯವರು ತುಂಬಾ ದಡ್ಡರಿದ್ದಾರೆ. ಅವರ ಜೊತೆ 20 ಅಲ್ಲ, 78 ಶಾಸಕರು ಇದ್ದೇವೆ. ಕಲಾಪದಲ್ಲಿ ಅವರ ಜೊತೆಗೆ ಕೂರುತ್ತೇವೆ, ಮಾತನಾಡುತ್ತೇವೆ. ಸಂಸಾರ ಬೇರೆ, ರಾಜಕಾರಣ ಬೇರೆ ಮಾಡುತ್ತೇವೆ. ನಾವು ಜನರ ಮೇಲೆ ನಂಬಿಕೆ ಇಟ್ಟಿದ್ದೇವೆ. ಗಂಟೆ, ಮುಹೂರ್ತ ಇಡುವವರಲ್ಲ ಎಂದು ಲೇವಡಿ ಮಾಡಿದರು.
ನಾವೆಲ್ಲ ಪಕ್ಷದ ಕಾರ್ಯಕರ್ತರು, ಹಳ್ಳಿಯಿಂದ ಬಂದಿರುವವರು. ನಮಗ್ಯಾಕೆ ಬೇರೆಯವರ ರಾಜಕಾರಣ? ಬಿಜೆಪಿಯವರು ಖುಷಿಯಿಂದ ಮಾತನಾಡುತ್ತಿದ್ದಾರೆ, ಮಾತನಾಡಲಿ ಬಿಡಿ ಎಂದು ಬಿಜೆಪಿ ನಾಯಕರಿಗೆ ಸಚಿವರು ಟಾಂಗ್ ಕೊಟ್ಟರು.
ಕಂಪ್ಲಿ ಶಾಸಕ ಗಣೇಶ್ ಅವರಿಗೆ ಜಾಮೀನು ಸಿಕ್ಕ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಶಾಸಕ ಗಣೇಶ್ ತುಂಬಾ ನೋವು ಅನುಭವಿಸಿದ್ದಾರೆ. ಹಲ್ಲೆಗೆ ಒಳಗಾಗಿದ್ದ ಆನಂದ್ ಸಿಂಗ್ ಅವರು ಕೂಡ ನೋವು ಪಟ್ಟಿದ್ದಾರೆ. ಮುಂದೆ ಅವರಿಬ್ಬರೂ ಸರಿಯಾದರೆ ಸಾಕು ಎಂದು ತಿಳಿಸಿದರು.