ಬೆಂಗಳೂರು: ಆನ್‍ಲೈನ್ ಮೂಲಕ ವ್ಯಕ್ತಿಯೊಬ್ಬರಿಂದ 22 ಲಕ್ಷ ರೂ. ಎಗರಿಸಿದ್ದ ಆರೋಪಿಯನ್ನು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ನಾಗಲ್ಯಾಂಡ್ ಮೂಲದ ಜಾನ್ ಖಾಜಿಛೇ (25) ಬಂಧಿತ ಆರೋಪಿ. ಜಾನ್ ಖಾಜಿಛೇ ಆಡುಗೊಡಿ ಮೂಲದ ವ್ಯಕ್ತಿಯ ಹಣವನ್ನು ಎಗರಿಸಿ ಈಗ ಸಿಕ್ಕಿಬಿದ್ದಿದ್ದಾನೆ. ಇನ್ನೂ ಅನೇಕ ಪ್ರಕರಣಗಳಲ್ಲಿ ಜಾನ್ ಭಾಗಿಯಾಗಿರುವ ಸಾಧ್ಯತೆಗಳಿದ್ದು, ಆತನನ್ನು ತೀವ್ರ ವಿಚಾರಣೆ ನಡೆಸಲಾಗಿ ಎಂದು ಪೊಲೀಸ್ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.
ಘಟನೆಯ ವಿವರ:
ಜಾನ್ ತಾನು ಆದಾಯ ತೆರಿಗೆ ಇಲಾಖೆ ಅಧಿಕಾರಿ ಅಂತ ಹೇಳಿಕೊಂಡು ಆಡುಗೊಡಿ ಮೂಲದ ವ್ಯಕ್ತಿಯೊಬ್ಬರಿಗೆ ಪರಿಚಯವಾಗಿದ್ದಾನೆ. ಬಳಿಕ ಅವರ ಮೊಬೈಲ್‍ಗೆ ಒಂದು ಲಿಂಕ್ ಕಳುಹಿಸಿ ಕ್ಲಿಕ್ ಮಾಡುವಂತೆ ಸಲಹೆ ನೀಡಿದ್ದಾನೆ. ಜಾನ್ ಮಾತು ನಂಬಿದ ವ್ಯಕ್ತಿ ಲಿಂಕ್ ಕ್ಲಿಕ್ ಮಾಡಿದ್ದಾರೆ. ಅದರ ಮೂಲಕ ಒಟಿಪಿ ನಂಬರ್ ಪಡೆದ ಜಾನ್, ವ್ಯಕ್ತಿಯ ಖಾತೆಯಿಂದ 22 ಲಕ್ಷ ರೂ. ಎಗರಿಸಿದ್ದಾನೆ.
ಈ ಕುರಿತು ಹಣ ಕಳೆದುಕೊಂಡ ವ್ಯಕ್ತಿಯು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರ ಕೈಗೆ ಆರೋಪಿ ಜಾನ್ ಸಿಕ್ಕಿಬಿದ್ದಿದ್ದಾನೆ. ಆತನ ಇನ್ನೂ ಅನೇಕ ಕೃತ್ಯಗಳಲ್ಲಿ ಭಾಗಿಯಾಗಿರುವ ಸಾಧ್ಯತೆಗಳಿವೆ ಎನ್ನುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv