ಬೆಂಗಳೂರು: ಮಹಿಳೆಯರ ಮೇಲಿನ ಅತ್ಯಾಚಾರ ಹೊರತು ಪಡಿಸಿ, ಬೇರೆಲ್ಲಾ ಕ್ರೈಂಗಳು ಸಿಲಿಕಾನ್ ಸಿಟಿಯಲ್ಲಿ ತಗ್ಗಿದಂತೆ ಕಾಣುತ್ತಿವೆ. 2019ರ ಜನವರಿಯಿಂದ ಕೊಲೆ, ದರೋಡೆ, ಸರಗಳ್ಳತನಗಳು ಗಣನೀಯವಾಗಿ ಇಳಿಕೆಯಾಗಿವೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಕ್ರೈಂಗಳು ವರದಿಯಾಗಿವೆ.
ಸಿಲಿಕಾನ್ ಸಿಟಿಯಲ್ಲಿ ಈ ವರ್ಷ 183 ಕೊಲೆ, 31 ಡಕಾಯಿತಿ, 461 ದರೋಡೆ ಮತ್ತು 195 ಸರಗಳ್ಳತನ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ತುಂಬಾ ಕಡಿಮೆ ಕ್ರೈಂ ರೇಟ್ ಆಗಿದೆ. ಆದರೆ ಉಡ್ತಾ ಪಂಜಾಬ್ ಸಿನಿಮಾ ಮಾದರಿಯಲ್ಲಿ ಉಡ್ತಾ ಬೆಂಗಳೂರು ಆಗಿದೇಯಾ ಎನ್ನುವ ಸಂಶಯ ಕಾಡುತ್ತಿದೆ.
Advertisement
Advertisement
ಮಾದಕವ್ಯಸನಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಳೆದೆರಡು ವರ್ಷದಲ್ಲಿ ಕಂಡುಬಂದ ಪ್ರಕರಣಗಳಿಗಿಂತ ಹೆಚ್ಚು ಅಮಲಿನ ಪ್ರಕರಣಗಳು ಈ ಬಾರಿ ದಾಖಲಾಗಿದ್ದು, ಎನ್‍ಡಿಪಿಎಸ್ (ಮಾದಕವಸ್ತು ನಿಯಂತ್ರಣ ಕಾಯ್ದೆ) ಅಡಿ ಈ ವರ್ಷ ಬರೋಬ್ಬರಿ 700 ಪ್ರಕರಣ ದಾಖಲಾಗಿವೆ. 2017ರಲ್ಲಿ 354 ಪ್ರಕರಣ, 2018ರಲ್ಲಿ 286 ಕೇಸ್ ದಾಖಲಾಗಿದ್ರೆ ಈ ಬಾರಿ 700 ಎನ್‍ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದು ಆಘಾತಕಾರಿ ವಿಚಾರವಾಗಿದೆ.
Advertisement
ರಾಜ್ಯ ರಾಜಧಾನಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಇನ್ನೂ ನಿಂತಿಲ್ಲ. ಮಹಿಳೆಯರ ಮೇಲೆ ಎಗ್ಗಿಲ್ಲದೇ ದೌರ್ಜನ್ಯ ದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಅತ್ಯಾಚಾರದಂತಹ ಪ್ರಕರಣಗಳು ಸಹ ವಿಪರೀತ ಏರಿಕೆಯಾಗಿದ್ದು, ಈ ವರ್ಷ 132 ಅತ್ಯಾಚಾರ ಕೇಸ್, 712 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.
Advertisement
ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೊ ದಂತಹ ಪ್ರಕರಣಗಳು ಕಡಿಮೆಯಾದರೂ ಅತ್ಯಾಚಾರಗಳ ಸಂಖ್ಯೆ ಜಾಸ್ತಿಯಾಗಿವೆ. ಮತ್ತೊಂದು ಆಘಾತಕಾರಿ ವಿಚಾರ ಅಂದ್ರೆ ಈ ವರ್ಷ ಬರೋಬ್ಬರಿ 10,000 ಕ್ಕಿಂತ ಹೆಚ್ಚು ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿವೆ. ಆದರೆ ಕಳೆದ ವರ್ಷ ಇಂತಹ ಪ್ರಕರಣಗಳ ಸಂಖ್ಯೆ 5,000 ದಷ್ಟು ಮಾತ್ರ ಇತ್ತು. ಸೈಬರ್ ಕ್ರೈಂ ದ್ವಿಗುಣಗೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹಿರಿಯ ಪೊಲೀಸರು ಹೇಳುತ್ತಿದ್ದಾರೆ.