– ಕೇರಳದಲ್ಲಿ 12,931 ಕೋಳಿಗಳ ಸಂಹಾರಕ್ಕೆ ಆದೇಶ
ಬೆಂಗಳೂರು: ಮಹಾಮಾರಿ ಕೊರೊನಾ ಆಯ್ತು, ಇದೀಗ ರಾಜ್ಯದ ಜನರಿಗೆ ಹೆಚ್1 ಎನ್1 ಭಯ ಶುರುವಾಗಿದೆ. ನೆರೆಯ ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು ಆತಂಕಕ್ಕೀಡು ಮಾಡಿದೆ.
ಕರ್ನಾಟಕದ ಗಡಿ ಭಾಗ ಬಂಡೀಪುರದಿಂದ 130 ಕಿ.ಮೀ. ದೂರದ ಕೋಯಿಕ್ಕೋಡ್‍ನಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ. ಸ್ಯಾಂಪಲ್‍ಗಳ ಪರೀಕ್ಷೆ ನಡೆಸಿದ ಮಧ್ಯಪ್ರದೇಶದ ಭೋಪಾಲ್‍ನಲ್ಲಿರುವ ಪ್ರಯೋಗಾಲಯ ಇಲ್ಲಿನ ಕೋಳಿಗಳಲ್ಲಿ ಹಕ್ಕಿಜ್ವರ ಇರುವುದನ್ನು ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ 12,931 ಕೋಳಿಗಳ ಸಂಹಾರಕ್ಕೆ ಆದೇಶ ನೀಡಿದೆ. 1 ಕಿ.ಮೀ. ವ್ಯಾಪ್ತಿಯಲ್ಲಿ ಕೋಳಿಗಳ ಸಂಹಾರಕ್ಕೆ ಆದೇಶ ನೀಡಿದ್ದು, ಕರ್ನಾಟಕದ ಗಡಿಭಾಗದಲ್ಲಿ ಈಗ ಹೈಅಲರ್ಟ್ ಘೋಷಿಸಲಾಗಿದೆ. ಅಲ್ಲದೆ ಮೈಸೂರಿನ ಗುಂಡ್ಲುಪೇಟೆ, ಮಡಿಕೇರಿ ಭಾಗದಲ್ಲಿ ಎಚ್ಚರ ವಹಿಸಲಾಗಿದ್ದು, ಕೇರಳದಿಂದ ಕೋಳಿಗಳು ಬರದಂತೆ ನಿಗಾ ವಹಿಸಲಾಗಿದೆ.
ಕೊಡಿಯತ್ತೂರು ಕೋಳಿ ಫಾರಂನಲ್ಲಿ 6193, ಕೋಯಿಕ್ಕೋಡ್ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ 3524, ಚಾತ್ತಮಂಗಲಂ ಪಂಚಾಯತ್ ವ್ಯಾಪ್ತಿಯಲ್ಲಿ 3214 ಕೋಳಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಆದರೆ ಇದೂವರೆಗೆ ಇಲ್ಲಿನ ಸೋಂಕು ಮನುಷ್ಯರಿಗೆ ಹರಡಿಲ್ಲ. ಇದನ್ನೂ ಓದಿ: ಕೊರೊನಾ ವೈರಸ್ ಎಂದರೇನು? ಹೇಗೆ ಹರಡುತ್ತೆ? ರೋಗ ಲಕ್ಷಣವೇನು?
ಸದ್ಯ ಹಕ್ಕಿಜ್ವರ ಕಾಣಿಸಿಕೊಂಡಿರುವ ಊರಿನ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇರಳ ಸರ್ಕಾರ ಸೂಚನೆ ನೀಡಿದೆ. ಅಲ್ಲದೆ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಶುಸಂಗೋಪನೆ, ಆರೋಗ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.
ಕೇರಳದಲ್ಲಿ ಬರ್ಡ್ ಫ್ಲೂ ಕಾಣಿಸಿಕೊಂಡ ಬೆನ್ನಲ್ಲೇ ಕರ್ನಾಟಕದಲ್ಲೂ ಅಲರ್ಟ್ ಘೋಷಿಸಲಾಗಿದೆ. ರಷ್ಯಾ ಸೇರಿದಂತೆ ನಾನಾ ದೇಶದಿಂದ ಕರ್ನಾಟಕಕ್ಕೂ ಹಕ್ಕಿಗಳು ವಲಸೆ ಬರುತ್ತವೆ. ಈ ತಿಂಗಳಲ್ಲಿ ಸಾಮಾನ್ಯವಾಗಿ ಬೇರೆ ಬೇರೆ ದೇಶದಿಂದ ರಂಗನತಿಟ್ಟು, ಕೊಕ್ಕರೆಬೆಳ್ಳೂರು ಸೇರಿದಂತೆ ಹಲವಾರು ಪಕ್ಷಿಧಾಮಗಳಿಗೆ ಹಕ್ಕಿಗಳು ವಲಸೆ ಬರುತ್ತವೆ. ಇವುಗಳ ಮೂಲಕ ಕೋಳಿಗಳಿಗೂ ಹಕ್ಕಿಜ್ವರ ಹಬ್ಬುವ ಭೀತಿ ಉಂಟಾಗಿದೆ. ಹೀಗಾಗಿ ಪಕ್ಷಿಧಾಮದ ಸಿಬ್ಬಂದಿಗೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ವೈಜ್ಞಾನಿಕವಾಗಿ ಹಕ್ಕಿ ಜ್ವರವನ್ನು ಬರ್ಡ್ ಇನ್‍ಫ್ಲೂಯೆನ್ಝಾ ಅಥವಾ ಬರ್ಡ್ ಫ್ಲೂ ಎನ್ನುತ್ತಾರೆ. ಈ ಸೋಂಕಿಗೆ ಮುಖ್ಯ ಕಾರಣ ಎಚ್5ಎನ್1 ಎಂಬ ಹೆಸರಿನ ವೈರಸ್. ಇದೊಂದು ತೀವ್ರ ಸಾಂಕ್ರಾಮಿಕ ಪಿಡುಗು ಆಗಿದೆ. ಕೋಳಿಗಳ ಗುಂಪಿನಲ್ಲಿ ಒಂದು ಕೋಳಿಗೆ ಸೋಂಕು ಅಂಟಿದರೂ ಸಾಕು 48 ಗಂಟೆಗಳ ಒಳಗೆ ಗುಂಪಿನ ಎಲ್ಲ ಕೋಳಿಗಳೂ ಸೋಂಕಿನಿಂದ ಸತ್ತು ಹೋಗುತ್ತವೆ. 2012 ರಲ್ಲಿ ಬೆಂಗಳೂರಿನ ಹೆಸರಘಟ್ಟ ಫಾರಂಗಳಲ್ಲಿ ಈ ಕಾಯಿಲೆ ಕಂಡುಬಂದು ತೀವ್ರ ಆತಂಕಕ್ಕೆ ಕಾರಣವಾಗಿತ್ತು. 2016ರಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು.
ಹಕ್ಕಿ ಜ್ವರ ಲಕ್ಷಣಗಳೇನು?
ಹಕ್ಕಿ ಜ್ವರದ ಸೋಂಕಿಗೆ ಒಳಗಾಗುವ ವ್ಯಕ್ತಿಗಳಲ್ಲಿ 2-3 ದಿನದಲ್ಲಿ ರೋಗ ಲಕ್ಷಣಗಳು ಪ್ರಕಟವಾಗುತ್ತವೆ. ಅತಿಯಾದ ಜ್ವರ, ಕೆಮ್ಮು, ತಲೆನೋವು, ಉಸಿರಾಡಲು ತೊಂದರೆಯಾಗುವುದು. ಎಕ್ಸ್ ರೇ ಪರೀಕ್ಷೆಯಿಂದ ಎದೆಯಲ್ಲಿ ಉಂಟಾಗಿರುವ ಬದಲಾವಣೆಗಳು ಎದ್ದು ಕಾಣುತ್ತವೆ. ಹಕ್ಕಿ ಜ್ವರದಿಂದ ಸಾವು ಕೂಡ ಸಂಭವಿಸಬಹುದು.
ರೋಗಿಯ ಮೂಗು ಮತ್ತು ಗಂಟಲಿನ ದ್ರವವನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿ ರೋಗ ಅಂಟಿರುವುದನ್ನು ದೃಢಪಡಿಸಿಕೊಳ್ಳಬಹುದು. 2016ರಲ್ಲಿ ರಾಜ್ಯದ ಅನೇಕ ಭಾಗದಲ್ಲಿ ಕಾಣಿಸಿಕೊಂಡಿತ್ತು. ಹೀಗಾಗಿ ಸದ್ಯ ಕೊರೊನಾ ಬಳಿಕ ಈ ಕಾಯಿಲೆ ಜನರನ್ನು ನಿದ್ದೆಗೆಡುವಂತೆ ಮಾಡಿದೆ.