ಬೆಂಗಳೂರು: ಕೊರೊನಾ ವೈರಸ್ ಇದೆ ಎಂದು ಶಂಕಿಸಲಾಗಿದ್ದ ಸಾವನ್ನಪ್ಪಿದ ವ್ಯಕ್ತಿಗೆ ಕೊರೊನಾ ಇರಲಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕೊರೊನಾ ವೈರಸ್ ಆತಂಕದ ಹಿನ್ನೆಲೆ ನಮ್ಮ ರಾಜ್ಯದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಶಂಕಿತರನ್ನು ತಪಾಸಣೆ ಮಾಡಿದ್ದೇವೆ. ಜೊತೆ ಕೆಲ ಜನ ಭಯಪಟ್ಟು ಸುಮ್ಮನೇ ಚೆಕಪ್ ಮಾಡಿಸಲು ಬರುತ್ತಾರೆ. ಆ ರೀತಿಯಲ್ಲಿ ಬರುವುದು ಬೇಡ, ಕೊರೊನಾ ಲಕ್ಷಣಗಳು ಕಂಡು ಬಂದರೆ ಕೆಮ್ಮು, ಜ್ವರ, ನೆಗಡಿ ಇದ್ದಾರೆ ಮಾತ್ರ ಬಂದು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿದರು.
ಕಲಬುರಗಿಯಲ್ಲಿ ಸಾವನ್ನಪ್ಪಿದ ವ್ಯಕ್ತಿ ಕೊರೊನಾ ಬಂದು ಸತ್ತಿಲ್ಲ. ಆತ ಜನವರಿ ಕೊನೆಯಲ್ಲಿ ಸೌದಿಗೆ ಹೋಗಿದ್ದರು. ನಂತರ ಫೆಬ್ರವರಿ 29 ರಂದು ವಾಪಸ್ ಬಂದಿದ್ದರು. ಅಲ್ಲಿಂದ ಬಂದು ನಂತರ ಅವರಿಗೆ ಸ್ವಲ್ಪ ಜ್ವರ ಇತ್ತು. ಆಗ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಸ್ಪೆಷಲ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ನಂತರ ವೈದ್ಯರ ಸಲಹೆಯ ಮೇರೆಗೆ ಮಾರ್ಚ್ 9ರ ರಾತ್ರಿ ಹೈದಾರಬಾದ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು ನಂತರ ಮಾರ್ಚ್ 10ರಂದು ರಾತ್ರಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.
ಸಾವನ್ನಪ್ಪಿದ ವ್ಯಕ್ತಿಗೆ 76 ವರ್ಷವಾಗಿದ್ದು, ಅವರಿಗೇ ಹಲವು ಕಾಯಿಲೆಗಳು ಇದ್ದವು. ಅಸ್ತಮಾ, ಅಪೆಂಡಿಕ್ಸ್, ಬಿಪಿ ಹೀಗೆ ಅವರು ಸಾಕಷ್ಟು ಬೇರೆ ಬೇರೆ ರೋಗಗಳಿಂದ ಬಳಲುತ್ತಿದ್ದರು. ಹಾಗಾಗಿ ಅವರು ಸಾವನ್ನಪ್ಪಿದ್ದಾರೆ. ನಮ್ಮ ರಾಜ್ಯದಲ್ಲಿ ಕೊರೊನಾ ಕೇವಲ 4 ಜನರಲ್ಲಿ ಮಾತ್ರ ಪಾಸಿಟಿವ್ ಕಂಡಿತ್ತು. ಆ ಸಂಖ್ಯೆ ಹಾಗೇ ಇದೆ ಇಂದು ಏರಿಕೆ ಆಗಿಲ್ಲ. ಜೊತೆಗೆ ಸಾವನ್ನಪ್ಪಿದ ವ್ಯಕ್ತಿಗೆ ಕೊರೊನಾ ಇರಲಿಲ್ಲ. ಅವರ ದೇಹವನ್ನು ರಾಜ್ಯದ ಗಡಿ ಭಾಗದಲ್ಲೇ ರಿಸಿವ್ ಮಾಡಿಕೊಂಡು ದಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಯಾರು ಈ ಮಹಮದ್ ಹುಸೇನ್ ಸಿದ್ದಿಕಿ?
ಫೆಬ್ರವರಿ 29ರಂದು ಸೌದಿ ಅರೇಬಿಯಾದಿಂದ ವೃದ್ಧ ಮೊಹ್ಮದ್ ಹುಸೇನ್ ಸಿದ್ದಿಕಿ, ಹೈದರಾಬಾದ್ ಮಾರ್ಗವಾಗಿ ಕಲಬುರಗಿ ನಗರಕ್ಕೆ ಬಂದಿದ್ದರು. ಮಾರ್ಚ್ 5ರಂದು ಸಿದ್ಧಿಕಿ ಅವರಿಗೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ವಿಶೇಷ ವಾರ್ಡ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಸಿದ್ದಿಕಿ ಅವರ ಗಂಟಲು ದ್ರವ ಸಂಗ್ರಹಿಸಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಲ್ಯಾಬ್‍ಗೆ ಕಳಿಸಲಾಗಿತ್ತು. ಆದರೆ ವರದಿಗೂ ಮುನ್ನವೇ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಸಿದ್ದಿಕಿಯವರನ್ನು ಹೈದರಾಬಾದ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು.
ಅನುಮಾನಗಳಿಗೆ ಕಾರಣವಾಯ್ತು ಪತ್ರ: ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ಹೊರಡಿಸಿರುವ ಜ್ಞಾಪನಾ ಪತ್ರ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮಹಮದ್ ಹುಸೇನ್ ಸಿದ್ದಿಕಿ (76) ಕೊವಿಡ್-19 (ಕೊರೊನಾ ವೈರಸ್)ನಿಂದ ಮರಣ ಹೊಂದಿರುವ ಪ್ರಯುಕ್ತ ಅಂತ್ಯಕ್ರಿಯೆ ಪ್ರಕ್ರಿಯೆ ಮುಗಿಯವರೆಗೂ ಕಲಬುರಗಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ| ಶರಣಬಸಪ್ಪ ಕ್ಯಾತನಾಳ ಹಾಗೂ ಅವರ ತಂಡ ಉಸ್ತುವಾರಿ ವಹಿಸಿಕೊಂಡು ಎಲ್ಲ ತರಹದ ಮುಂಜಾಗ್ರತೆ ಹಾಗೂ ನಿಯಂತ್ರಣ ಕೈಗೊಂಡು ವರದಿ ನೀಡುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕಲಬುರಗಿ ಮತ್ತು ಹೈದರಾಬಾದ್ ಆಸ್ಪತ್ರೆಗಳಲ್ಲಿ ಯಾವ ರೀತಿಯ ಚಿಕಿತ್ಸೆ ನೀಡಲಾಗಿತ್ತು ಎಂಬುದರ ಬಗ್ಗೆ ಮಾಹಿತಿಗಳು ಅಸ್ಪಷ್ಟವಾಗಿವೆ. ಸಿದ್ದಿಕಿಯವರ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಲು ಆರೋಗ್ಯಾಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಬೆಂಗಳೂರಿನ ಪ್ರಯೋಗಾಲಯದ ಮೆಡಿಕಲ್ ರಿಪೋರ್ಟ್ ಗಾಗಿ ಕಾಯುತ್ತಿದ್ದೇವೆ ಎಂಬ ಮಾತುಗಳು ಆರೋಗ್ಯ ಇಲಾಖೆಯಲ್ಲಿ ಕೇಳಿ ಬರುತ್ತಿವೆ. ಪ್ರಯೋಗಾಲಯದ ವರದಿಗೂ ಮುನ್ನವೇ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಜ್ಞಾಪನಾ ಪತ್ರ ಚರ್ಚೆಗೆ ಗ್ರಾಸವಾಗಿದೆ.