ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿದರೆ ದಂಡ ಹಾಕುತ್ತಾರಲ್ಲ ಎಂದು ಜನರು ಪೊಲೀಸರನ್ನು ಬೈದಾಡಿಕೊಂಡು ತಿರುಗಿರೋದೆ ಹೆಚ್ಚು. ಆದ್ರೆ ಈಗ ಬೆಂಗಳೂರಿನ ಶ್ವಾನದಳದ ಕಾನ್ಸ್‌ಟೇಬಲ್ ಒಬ್ಬರು ಸಂಚಾರಿ ನಿಯಮ ಪಾಲಿಸಿ ಎಂದು ಹಾಡಿರುವ ಹಾಡು ಎಲ್ಲರ ಮನ ಗೆದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು ಸಖತ್ ಸೌಂಡು ಮಾಡುತ್ತಿದೆ.
ಪೊಲೀಸರನ್ನ ಕಂಡರೆ ಭಯ ಬೀಳುವ ಮಂದಿ ಇರುತ್ತಾರೆಯೇ ಹೊರತು ಅವರ ಪ್ರತಿಭೆಯನ್ನು ಗುರುತಿಸುವವರು ಕಡಿಮೆ. ಅವರಲ್ಲಿಯೂ ಸಾಕಷ್ಟು ಪ್ರತಿಭಾನ್ವಿತರಿದ್ದಾರೆ, ಬರೀ ಪೊಲೀಸ್ ಕೆಲಸ ಮಾತ್ರವಲ್ಲ ಬೇರೆ ಸಮಾಜಮುಖಿ ಕೆಲಸ ಕೂಡ ಮಾಡಲು ಸೈ ಎನ್ನುವ ಪೊಲೀಸ್ ಸಿಬ್ಬಂದಿ ಇದ್ದಾರೆ. ಹೀಗೆಯೇ ಸಂಚಾರಿ ನಿಯಮ ಪಾಲಿಸಿ ಎಂದು ಜನರಲ್ಲಿ ಜಾಗೃತಿ ಮೂಡಿಸಲು ಹೊರಟ ಬೆಂಗಳೂರಿನ ಶ್ವಾನದಳದ ಕಾನ್ಸ್‌ಟೇಬಲ್ ಮೌಲಾಲಿ ಕೆ ಆಲಗೂರ್ ಈಗ ಎಲ್ಲಡೆ ಫೇಮಸ್ ಆಗಿದ್ದಾರೆ. ಅವರು ಹಾಡಿದ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಕಾನ್ಸ್‌ಟೇಬಲ್ ಹಾಡಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಸಂಚಾರಿ ನಿಯಮ ಪಾಲಿಸದೆ ದುಬಾರಿ ದಂಡ ವಿಧಿಸಿ ವಾಹನ ಸವಾರರು ಹೈರಾಣಾಗಿದ್ದರು. ಆದ್ದರಿಂದ ಸಂಚಾರಿ ನಿಯಮಗಳನ್ನು ಹಾಡಿನ ಮೂಲಕ ಹೇಳಿದರೆ ಜನರ ಮನಮುಟ್ಟುತ್ತದೆ ಎಂಬುದನ್ನು ಅರಿತ ಮೌಲಾಲಿ ಅವರು ಸಂಚಾರಿ ನಿಯಮಗಳ ಕುರಿತಾದ ಹಾಡು ರಚಿಸಿ ಹಾಡಿದ್ದಾರೆ. ಈ ಗೀತೆಯನ್ನು ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ.ಡಿ.ಚನ್ನಣ್ಣನವರ್ ಫ್ಯಾನ್ ಪೇಜ್‍ನಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ 20 ಲಕ್ಷಕ್ಕೂ ಅಧಿಕ ವ್ಯೂವ್ಸ್ ಪಡೆದಿದೆ.
https://www.facebook.com/RaviDCFansClub/videos/663421177483765/
ಇದೊಂದೇ ಅಲ್ಲ ಮೌಲಾಲಿ ಅವರು ಅನೇಕ ಹಾಡುಗಳನ್ನ ರಿಮೇಕ್ ಮಾಡಿ, ಹಾಡುತ್ತಾರೆ. ಇವರ ಪ್ರತಿಭೆಗೆ ಬೆಂಗಳೂರು ಕಮಿಷನರ್ ಭಾಸ್ಕರ್ ರಾವ್, ಎಸ್‍ಪಿ ರವಿ ಚನ್ನಣ್ಣನವರ್ ಸೇರಿದಂತೆ ಅನೇಕ ಅಧಿಕಾರಿಗಳು ಹಾಗೂ ಇತರರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.