ಬೆಂಗಳೂರು: ಇಂದಿನಿಂದ ದೆಹಲಿ ಅಂಗಳದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪರವಾದ ಲಾಬಿ ಆರಂಭವಾಗಲಿದೆ. ಶತಾಯಗತಾಯ ವಿಪಕ್ಷ ನಾಯಕನ ಸ್ಥಾನ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ(ಸಿಎಲ್‍ಪಿ) ನಾಯಕನ ಸ್ಥಾನ ಎರಡೂ ಸಿದ್ದರಾಮಯ್ಯರಿಗೆ ಕೊಡಬೇಕು ಎಂದು ಅವರ ಬೆಂಬಲಿಗರು ಲಾಬಿ ಆರಂಭಿಸಲು ನಿರ್ಧರಿಸಿದ್ದಾರೆ.
ಮೂರು ದಿನಗಳ ಕಾಲ ದೆಹಲಿಯಲ್ಲೇ ಬೀಡು ಬಿಟ್ಟು ಸಿದ್ದರಾಮಯ್ಯ ಪರವಾಗಿ ಎಐಸಿಸಿ ನಾಯಕರ ಭೇಟಿಗೆ ಮುಂದಾಗಿದ್ದಾರೆ. ಮೂರು ದಿನದ ಹಿಂದೆ ಮಾಜಿ ಸಚಿವ ಮಹದೇವಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಬ್ಲೂ ಪ್ರಿಂಟ್ ಸಿದ್ಧವಾಗಿದೆ. ಹೇಗಾದರೂ ಮಾಡಿ ವಿಪಕ್ಷ ನಾಯಕನ ಸ್ಥಾನ ಹಾಗೂ ಸಿಎಲ್ ಪಿ ನಾಯಕನ ಸ್ಥಾನವನ್ನು ಸಿದ್ದರಾಮಯ್ಯಗೆ ನೀಡುವಂತೆ ಮಹದೇವಪ್ಪ ನೇತೃತ್ವದಲ್ಲಿ ದೆಹಲಿಯಲ್ಲಿ ಲಾಬಿ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಸಿದ್ದರಾಮಯ್ಯ ಬೆಂಬಲಿಗರ ಪಡೆ ಇಂದು ಸಂಜೆಯೊಳಗೆ ದೆಹಲಿಗೆ ತಲುಪಲಿದೆ.
Advertisement
Advertisement
ಮಂಗಳವಾರದವರೆಗೆ ದೆಹಲಿಯಲ್ಲೇ ಇರಲಿರುವ ಸಿದ್ದರಾಮಯ್ಯ ಬೆಂಬಲಿಗರು, ಎಐಸಿಸಿ ಅಧ್ಯಕ್ಷೆ ಸೋನಿಯಗಾಂಧಿ ಭೇಟಿಗೆ ಪ್ರಯತ್ನಿಸಲಿದ್ದಾರೆ. ಸೋನಿಯಗಾಂಧಿಯವರ ಭೇಟಿ ಸಾಧ್ಯವಾಗದಿದ್ದರೆ ಎಐಸಿಸಿಯ ಇತರೆ ಪ್ರಮುಖ ನಾಯಕರನ್ನ ಭೇಟಿ ಮಾಡಿ ಸಿದ್ದರಾಮಯ್ಯ ಪರವಾಗಿ ಲಾಬಿ ಮಾಡಲು ಮುಂದಾಗಿದ್ದಾರೆ.
Advertisement
ಕಾಂಗ್ರೆಸ್ ಹೈ ಕಮಾಂಡ್ ಮುಂದಿನ ವಾರದಲ್ಲೇ ವಿಪಕ್ಷ ನಾಯಕ, ಸಿಎಲ್‍ಪಿ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ಮಾಡಲಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರ ದೆಹಲಿ ಲಾಬಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.