ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟೊಂದು ದೊರೆತಿದೆ.
ಹೌದು. ಸ್ವಾಮಿ ನಿಷ್ಠೆಗಾಗಿ ರಮೇಶ್ ಪ್ರಾಣತ್ಯಾಗ ಮಾಡಿದ್ರಾ ಅನ್ನೋ ಅನುಮಾನವೊಂದು ಮೂಡಿದೆ. ಯಾಕೆಂದರೆ ರಮೇಶ್, ಪರಮೇಶ್ವರ್ ಅವರ ಬಹುತೇಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಹೀಗಾಗಿ ಪರಮೇಶ್ವರ್ ಅವರು ರಮೇಶ್ ಫೋನಿನಲ್ಲೇ ಸಾಕಷ್ಟು ಬಾರಿ ಮಾತುಕತೆ ನಡೆಸಿದ್ದರು. ಇದರ ಪ್ರತಿಯೊಂದು ಆಡಿಯೋ ಸಂಭಾಷಣೆಯನ್ನೂ ತಮ್ಮ ಮೊಬೈಲಿನಲ್ಲಿ ರಮೇಶ್ ರೆಕಾರ್ಡ್ ಮಾಡಿದ್ದರು.
ಐಟಿಯವರು ಮೆಡಿಕಲ್ ಸೀಟ್ ವಿಚಾರವಾಗಿ ಆನಂದ್ ಬಗ್ಗೆಯೂ ರಮೇಶ್ ಬಳಿ ಕೇಳಿದ್ದು, ರಮೇಶ್ ಸಹಿ ಕೂಡ ಅಧಿಕಾರಿಗಳು ಪಡೆದಿದ್ದರು. ಇದರಿಂದ ಬೆದರಿದ ರಮೇಶ್, ನಾನು ಬದುಕಿದ್ರೆ ಐಟಿಯವರು ಸುಮ್ಮನೆ ಬಿಡುವುದಿಲ್ಲ. ಅನ್ನ ತಿಂದ ಮನೆಯ ಬಗ್ಗೆ ಮಾತನಾಡಿದರೆ ದೇವರು ಕ್ಷಮಿಸಲ್ಲ. ನಾನಿದ್ದರೆ ತಾನೇ ನನ್ನಿಂದ ಮಾಹಿತಿ ತೆಗೆಯೋದು ಎಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ಹುಟ್ಟಿಕೊಂಡಿದೆ.
ಶನಿವಾರ ಬೆಳಗ್ಗೆ ರಮೇಶ್ ತನ್ನ ಆಪ್ತರಿಬ್ಬರಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಅಲ್ಲದೆ ಆ ಬಳಿಕ ತನ್ನ ಮೊಬೈಲ್ ಸ್ವಿಚ್ಚ್ ಆಫ್ ಮಾಡಿಕೊಮಡಿದ್ದರು. ಇದಾದ ಬಳಿಕ ಕೆಲ ಗಂಟೆಗಳಲ್ಲೇ ರಮೇಶ್ ಜ್ಞಾನ ಭಾರತಿ ಕ್ಯಾಂಪಸ್ ನಲ್ಲಿ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಕುಟುಂಬಸ್ಥರು ಸ್ಥಳಕ್ಕೆ ದೌಡಾಯಿಸಿದ್ದು, ಆಕ್ರಂದನ ಮುಗಿಲುಮುಟ್ಟಿತ್ತು. ಪರಮೇಶ್ವರ್, ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ ನಾಯಕರೂ ಕೂಡ ಘಟನಾ ಸ್ಥಳಕ್ಕೆ ಬಂದು ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಪ್ರಯತ್ನ ಮಾಡಿದ್ದರು. ಭಾನುವಾರ ಸ್ವಗೃಹ ರಾಮನಗರದ ಮೇಳೆಹಳ್ಳಿಯಲ್ಲಿ ರಮೇಶ್ ಅಂತ್ಯಕ್ರಿಯೆ ನಡೆಯಿತು.
ಈ ಮಧ್ಯೆ ಕಾಂಗ್ರೆಸ್ ನಾಯಕರು, ರಮೇಶ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳೇ ಕಾರಣ ಎಂದು ಗಂಭೀರ ಆರೋಪ ಮಾಡಿದರೆ, ಇತ್ತ ಬಿಜೆಪಿ ನಾಯಕರು ರಮೇಶ್ ಆತ್ಮಹತ್ಯೆಯನ್ನು ರಾಜಕೀಯಗೊಳಿಸಬೇಡಿ ಎಂದು ಹೇಳುತ್ತಿದ್ದಾರೆ.
https://www.youtube.com/watch?v=viXasZvT2Qo