ಎಂಟಿಬಿ ದ್ವಂದ್ವ ಹೇಳಿಕೆ- ಗುಪ್ತಚರ ಇಲಾಖೆಗೆ ಸಿಎಂ ಸೂಚನೆ

Public TV
1 Min Read
MTB

ಬೆಂಗಳೂರು: ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಕೈ ಕೊಡುವ ಭೀತಿಯಲ್ಲಿ ದೋಸ್ತಿಗಳಿದ್ದಾರೆ. ಎಂಟಿಬಿ ಅವರ ಅವರ ದ್ವಂದ್ವ ಹೇಳಿಕೆಯಿಂದ ಮತ್ತೆ ದೋಸ್ತಿಗಳಲ್ಲಿ ಆತಂಕ ಎದುರಾಗಿದೆ.

ಎಂಟಿಬಿ ನಾಗರಾಜ್ ಕೈಕೊಡ್ತಾರಾ ಎಂದು ಆತಂಕಕ್ಕೊಳಗಾದ ಸಿಎಂ, ಎಂಟಿಬಿ ಮೇಲೆ ನಿಗಾ ಇಡುವಂತೆ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಎಂಟಿಬಿ ಚಲನವಲನಗಳ ಮೇಲೆ ಇಂಟೆಲಿಜೆನ್ಸ್ ಕಣ್ಣಿಟ್ಟಿದೆ. ಗರುಡಾಚಾರ್ ಪಾಳ್ಯದ ಎಂಟಿಬಿ ನಾಗರಾಜ್ ಮನೆ ಬಳಿ ಗೂಢಾಚಾರರು ಬೀಡು ಬಿಟ್ಟಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

SIDDARAMAIAH MTB NAGARAJ b

ಗೆದ್ದೇ ಗೆಲ್ತೀನಿ ಅನ್ನೋ `ವಿಶ್ವಾಸ’ದ ನಿರೀಕ್ಷೆಯಲ್ಲಿ ಮುಖ್ಯಮಂತ್ರಿ ಇದ್ದಾರೆ. ಆದರೆ ಹೇಗಾದ್ರೂ ಮಾಡಿ ಆ ವಿಶ್ವಾಸವನ್ನು ಇಲ್ಲದಂತೆ ಮಾಡಬೇಕು ಎಂದು ಬಿಜೆಪಿ ಪಣ ತೊಟ್ಟಿದೆ. ರಾಜೀನಾಮೆ ಕೊಟ್ಟ ಶಾಸಕರನ್ನು ಮತ್ತೆ ಸೆಳೆಯಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆದರೆ ಫಲಕೊಡುವ ಲಕ್ಷಣಗಳು ಕಾಣುತ್ತಿಲ್ಲ.

MTB copy

ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಮನವೊಲಿಸಲು ಶನಿವಾರ ದಿನವಿಡೀ ಕಾಂಗ್ರೆಸ್ ಯತ್ನಿಸಿತು. ಆದರೆ ಎಂಟಿಬಿ ಮಾತ್ರ ಬಗ್ಗುತ್ತಿಲ್ಲ. ಸಿದ್ದರಾಮಯ್ಯ ಇದ್ದರು ಎಂಬ ಕಾರಣಕ್ಕೆ ಆಯ್ತು ರಾಜೀನಾಮೆ ವಾಪಸ್ ಪಡೆಯುವುದಾಗಿ ಹೇಳಿದ್ದರು. ಆದರೆ, ಇದಾದ ಕೇವಲ ಐದು ನಿಮಿಷದಲ್ಲಿ ಎಂಟಿಬಿ ಸ್ವರ ಬದಲಾಗಿತ್ತು. ಹಳೆ ನಿಲುವಿಗೆ ಅಂಟಿಕೊಂಡಿದ್ದು, ಸುಧಾಕರ್ ಜೊತೆ ಚರ್ಚೆ ನಡೆಸಿದ ಬಳಿಕವಷ್ಟೇ ಅಂತಿಮ ತೀರ್ಮಾನ ಎಂದು ಪ್ರಕಟಿಸಿದ್ದರು.

Sudhakar MTB

ಸುಧಾಕರ್ ರಾಜೀನಾಮೆ ಪಡೆದರೆ ಮಾತ್ರ ನಾನು ರಾಜೀನಾಮೆ ವಾಪಸ್ ಪಡೆಯುತ್ತೇನೆ. ನಾನು ಒಬ್ಬನೇ ವಾಪಸ್ ಪಡೆದರೆ ಏನು ಪ್ರಯೋಜನ. ಇದ್ದರೆ ಇಬ್ಬರೂ ಜೊತೆಯಲ್ಲೇ ಇರುತ್ತೇವೆ. ಹೋದರೆ ಇಬ್ಬರೂ ಹೊರ ಹೋಗುತ್ತೇವೆ ಎಂದು ಹೇಳಿದ್ದರು. ಎಂಟಿಬಿ ಅವರ ಈ ಡಬಲ್ ಗೇಮ್ ಕಂಡು ಬೆಸ್ತು ಬೀಳುವ ಸರದಿ ಕಾಂಗ್ರೆಸ್ ನಾಯಕರದ್ದಾಗಿದೆ.

ಬೆಂಗಳೂರಿನಲ್ಲೇ ಇದ್ದಮತ್ತೊಬ್ಬ ಶಾಸಕ ಸುಧಾಕರ್ ಸದ್ದಿಲ್ಲದೇ ಮುಂಬೈ ಸೇರಿಬಿಟ್ಟಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸ್ ಕಂಗಾಲಾಗಿದೆ. ರಾಮಲಿಂಗಾರೆಡ್ಡಿ ಇಂದು ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

Share This Article
Leave a Comment

Leave a Reply

Your email address will not be published. Required fields are marked *