ಬೆಂಗಳೂರು: ಡಿಸೆಂಬರ್ 9 ರ ಬಳಿಕ ನಮ್ಮ ಮುಂದೆ ಎರಡು ಆಪ್ಶನ್ ಇದೆ. ಮೈತ್ರಿ ಮಾಡಿಕೊಳ್ಳುವುದು ಒಂದು ಆಪ್ಶನ್ ಆದರೆ, ಎರಡನೇಯದ್ದು ವಿರೋಧ ಪಕ್ಷದಲ್ಲಿ ಕೂರುವುದು. ಜೆಡಿಎಸ್ ಜೊತೆ ಮೈತ್ರಿ ವಿಚಾರವಾಗಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಪಚುನಾವಣೆ ಬಹಳ ಗಂಭೀರವಾದ ಚುನಾವಣೆಯಾಗಿದೆ. ರಾಜ್ಯದ ಆಡಳಿತ ಭವಿಷ್ಯ ನಿರ್ಮಾಣ ಮಾಡುವ ಚುನಾವಣೆಯಾಗಿದೆ. ಮೇಲ್ನೋಟಕ್ಕೆ 15 ಕ್ಷೇತ್ರಗಳ ಚುನಾವಣೆ ಮಾತ್ರ ಅನ್ನೋ ಭಾವನೆಯಿದ್ದರೂ ಮಹತ್ವ ಇದೆ. ಯಡಿಯೂರಪ್ಪ ಅವರು ಸಮ್ಮಿಶ್ರ ಸರ್ಕಾರವನ್ನು ಕೆಡವಿ ಸರ್ಕಾರ ರಚನೆ ಮಾಡಿದರು. ಇಷ್ಟೆಲ್ಲ ಆಮಿಷವೊಡ್ಡಿ ಶಾಸಕರನ್ನ ಕೊಂಡುಕೊಂಡು ಸರ್ಕಾರ ಮಾಡಿದ್ದು ಯಾವ ಉದ್ದೇಶಕ್ಕೆ ಯಡಿಯೂರಪ್ಪನವರೇ, ರಾಜ್ಯದಲ್ಲಿ ಪ್ರವಾಹ ಬಂದಾಗ ಸರ್ಕಾರವನ್ನು ಹೇಗೆ ನಡೆಸಿದ್ರಿ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಏಕಾಂಗಿ ಅಲ್ಲ. ಅವರನ್ನ ಏಕಾಂಗಿ ಮಾಡಲು, ಒಬ್ಬಂಟಿಯಾಗೋದಕ್ಕೆ ನಾವು ಬಿಡಲ್ಲ. ನಾಯಕತ್ವದ ಪ್ರಶ್ನೆ ಈಗ ಏಕೆ ಬಂತು ಗೊತ್ತಿಲ್ಲ. ನಾಯಕತ್ವವನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಕಾಂಗ್ರೆಸ್ಸಿನಲ್ಲಿ ನಾಯಕರಿಗೇನು ಕೊರತೆ ಇಲ್ಲ. ಒಬ್ಬೊಬ್ಬರಾಗಿ ಹೋಗಿ ಪ್ರಚಾರ ಮಾಡೋದು ಒಂದು ತಂತ್ರಗಾರಿಕೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಜೊತೆ ಮನಸ್ತಾಪ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಒಟ್ಟಿಗೆ ಹೋಗಿ ಪ್ರಚಾರ ಮಾಡದೇ ಇರೋದು ಕೂಡ ಒಂದು ಸ್ಟ್ರಾಟಜಿ. ಸಿಂಗಲ್ ಆಗಿ ಹೋಗಿ ಪ್ರಚಾರ ಮಾಡೋದು ಕೂಡ ತಂತ್ರ. ಸಿದ್ದರಾಮಯ್ಯ ಏಕಾಂಗಿ ಆಗೋಕೆ ನಾವು ಬಿಡಲ್ಲ ಎಂದು ನಗುತ್ತಲೇ ಎದ್ದು ಹೋದರು.