ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೊತೆ ಸಿಎಂ ಯಡಿಯೂರಪ್ಪ ಮಾತುಕತೆಗೆ ನಾಳೆ ಹೊಸ ಹುಬ್ಬಳ್ಳಿಯಲ್ಲಿ ಮುಹೂರ್ತ ನಿಗದಿಯಾಗಿದೆ. ಒಂದೂಕಾಲು ತಿಂಗಳಿಂದ ವಿಳಂಬವಾಗಿರುವ ಸಚಿವ ಸಂಪುಟ ವಿಸ್ತರಣೆ ಕಸರತ್ತಿಗೆ ಈಗಲಾದರೂ ತೆರೆ ಬೀಳುತ್ತಾ ಅನ್ನೋ ಕುತೂಹಲ ಕೆರಳಿದೆ. ಈ ಮಧ್ಯೆ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಚಟುವಟಿಕೆ ಗರಿಗೆದರಿದ್ದು ಇಂದು ಸಿಎಂ ಬಿಎಎಸ್‍ವೈ ಭೇಟಿಗೆ ದೌಡಾಯಿಸಲಾರಂಭಿಸಿದ್ದಾರೆ.
Advertisement
ಸಿಎಂ ಅವರ ಧವಳಗಿರಿ ನಿವಾಸಕ್ಕೆ ಇಂದು ಬೆಳಗ್ಗೆಯಿಂದಲೂ ಹಲವು ಸಚಿವ ಸ್ಥಾನದ ಆಕಾಂಕ್ಷಿಗಳು ಭೇಟಿ ನೀಡಿದರು. ಪಕ್ಷದ ಶಾಸಕರಾದ ಉಮೇಶ್ ಕತ್ರಿ, ಗೂಳಿಹಟ್ಟಿ ಶೇಖರ್, ಎಂ.ಚಂದ್ರಪ್ಪ, ಕರುಣಾಕರ ರೆಡ್ಡಿ, ಎಂ.ಪಿ.ರೇಣುಕಾಚಾರ್ಯ, ಅರಗ ಜ್ಞಾನೇಂದ್ರ ಮುಂತಾದವರು ಸಿಎಂ ಬಿಎಸ್ವೈ ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಬೇಡಿಕೆ ಮುಂದಿಟ್ಟರು. ವಲಸಿಗರಾದ ಶಾಸಕ ಗೋಪಾಲಯ್ಯ, ಎಂಟಿಬಿ ನಾಗರಾಜ್, ಆರ್ ಶಂಕರ್ ಸಹ ಸಿಎಂ ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಒತ್ತಾಯಿಸಿದರು. ಉಳಿದ ಆಕಾಂಕ್ಷಿಗಳು ಸಹ ಇಂದು ಸಿಎಂ ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.
Advertisement
Advertisement
ಸಂಪುಟ ವಿಸ್ತರಣೆ ವಿಳಂಬ, ಸಂಪುಟ ಸೇರ್ಪಡೆಗೆ ಶಾಸಕರ ಆಯ್ಕೆ, ಡಿಸಿಎಂ ಹುದ್ದೆಗಳ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳು ಒತ್ತಡದಲ್ಲಿದ್ದಾರೆ. ನಾಳೆ ಅಮಿತ್ ಶಾ ಭೇಟಿ ಮಾಡಿದರೂ ಈ ತಿಂಗಳಲ್ಲೇ ಸಂಪುಟ ವಿಸ್ತರಣೆ ನಡೆಯಲಿದೆ ಅನ್ನೋ ಬಗ್ಗೆ ಖುದ್ದು ಸಿಎಂಗೇ ನಂಬಿಕೆ ಇಲ್ಲ. ಹಾಗಾಗಿ ಸಿಎಂ ಅವರು ತಮ್ಮನ್ನು ಭೇಟಿ ಮಾಡುತ್ತಿರುವ ಆಕಾಂಕ್ಷಿಗಳಿಗೆ ಖಚಿತ ಭರವಸೆ ಕೊಡುತ್ತಿಲ್ಲ ಎಂದು ಹೇಳಲಾಗಿದೆ. ನಾಳೆ ಅಮಿತ್ ಶಾ ಅವರ ಜೊತೆ ಮಾತುಕತೆ ನಡೆದ ಮೇಲಷ್ಟೇ ಮುಂದಿನ ಬೆಳವಣಿಗೆಗಳ ಬಗ್ಗೆ ಗೊತ್ತಾಗಲಿದೆ. ಹೈಕಮಾಂಡ್ ಮನಸ್ಸಲ್ಲೇನಿದೆ ಅನ್ನೋದೂ ನಾಳೆಯೇ ಗೊತ್ತಾಗಲಿದೆ.