ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಸದಾಕಾಲ ಹೊರಗೆ ಕಾಣಿಸಿಕೊಳ್ಳೋದು ತಮ್ಮ ನೆಚ್ಚಿನ ಶ್ವೇತ ವರ್ಣದ ಸಫಾರಿ ಡ್ರೆಸ್‍ನಲ್ಲೇ. ಅವರಿಗೂ ಬಿಳಿ ಸಫಾರಿಗೂ ಅವಿನಾಭಾವ ನಂಟು. ಆದರೆ ಅಪರೂಪವೆಂದರೂ ಸರಿಯೇ ಕೆಲವೊಮ್ಮೆ ಮಾತ್ರ ಯಡಿಯೂರಪ್ಪನವರು ತಮ್ಮ ಬಿಳಿ ಸಫಾರಿಗೆ ರಜೆ ಕೊಡುತ್ತಾರೆ. ಆ ಸಂದರ್ಭ ಇಂದು ಮತ್ತೆ ಬಂದಿದೆ. ಯಡಿಯೂರಪ್ಪನವರು ಇಂದು ಅಪರೂಪಕ್ಕೆ ಸೂಟು ಬೂಟು ಧರಿಸಿ ಮಿಂಚುತ್ತಿದ್ದರು. ಸ್ವಿಟ್ಜರ್ಲೆಂಡ್ ಗೆ ಹೊರಟ ಹಿನ್ನೆಲೆಯಲ್ಲಿ ಸಿಎಂ ಇಂದು ತಮ್ಮ ಬಿಳಿ ಬಣ್ಣದ ಸಫಾರಿ ಬದಲು ಸೂಟು ಬೂಟು ಧರಿಸಿದ್ದರು.
Advertisement
ಸ್ವಿಟ್ಜರ್ಲೆಂಡ್‍ನ ದಾವೋಸ್ ಗೆ ಹೊರಟ ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಬೆಳಗ್ಗೆಯೇ ಸೂಟು ಧರಿಸಿ ಸಿದ್ಧವಾಗಿದ್ರು. ವಿಮಾನ ನಿಲ್ದಾಣಕ್ಕೆ ಹೊರಡಲು ತಮ್ಮ ಧವಳಗಿರಿ ನಿವಾಸದಿಂದ ಇಂದು ಬೆಳಗ್ಗೆ ಹೊರಗೆ ಬಂದ ಯಡಿಯೂರಪ್ಪನವರನ್ನು ಕಂಡು ಎಲ್ಲರೂ ಅಚ್ಚರಿಗೊಂಡರು. ಯಡಿಯೂರಪ್ಪನವರು ಮದುಮಗನಂತೆ ಸೂಟ್ ಧರಿಸಿದ್ದರು. ಇನ್ ಮಾಡಿದ್ದ ವೈಟ್ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್, ಕಪ್ಪು ಶೂ, ಶರ್ಟ್ ಮೇಲೆ ನೇವಿ ಗ್ರೇ ಬಣ್ಣದ ಕೋಟ್ ಧರಿಸಿ ಸಿಎಂ ಮಿಂಚುತ್ತಿದ್ರು.
Advertisement
Advertisement
ಇವತ್ತಷ್ಟೇ ಅಲ್ಲ, ದಾವೋಸ್ ಶೃಂಗ ಸಭೆ ನಡೆಯುವ ಐದು ದಿನಗಳೂ ಸಿಎಂ ಸೂಟ್ ಧರಿಸುತ್ತಾರೆ. ಐದು ದಿನಗಳಿಗೆ ಐದು ವಿವಿಧ ಬಣ್ಣಗಳ ವೈವಿಧ್ಯಮಯ ಸೂಟ್ಸ್ ಗಳನ್ನು ಮುಖ್ಯಮಂತ್ರಿಗಳು ತಮ್ಮೊಂದಿಗೆ ಕೊಂಡೊಯ್ದಿದ್ದಾರೆ. ದಿನಕ್ಕೊಂದು ಸೂಟ್ಸ್ ಧರಿಸಿ ಸಿಎಂ ಜಾಗತಿಕ ಮಟ್ಟದ ಉದ್ಯಮಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಸಿಎಂ ತಮ್ಮ ಜೊತೆ ನಾಲ್ಕು ಸೂಟ್ ಕೇಸ್ ಗಳಲ್ಲಿ ಸೂಟ್ ಗಳು, ಚಳಿ ತಡೆಯಲು ಬೆಚ್ಚನೆಯ ಉಡುಪುಗಳು, ಸಾದಾ ಉಡುಪುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ದಾವೋಸ್ ನಲ್ಲಿ ಚಳಿ ತಡೆಯಲು ಒಂದಷ್ಟು ಸ್ವೆಟರ್, ಸಾಕ್ಸ್, ಗ್ಲೌಸ್ ಗಳನ್ನು ಮಕ್ಕಳು ಸಹ ಯಡಿಯೂರಪ್ಪಗೆ ಕೊಟ್ಟು ಕಳಿಸಿದ್ದಾರಂತೆ. ಒಟ್ಟಿನಲ್ಲಿ ಮುಖ್ಯಮಂತ್ರಿಗಳು ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡೇ ಫಾರಿನ್ ಗೆ ಹೊರಟಿದ್ದಾರೆ.