ಬೆಂಗಳೂರು: ನಾಳೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನದ ಹೈವೋಲ್ಟೆಜ್ ಪಂದ್ಯಾವಳಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್, ವಾಹನ ನಿಲುಗಡೆ ಸೇರಿದಂತೆ ಕೆಲವೊಂದು ಬದಲಾವಣೆ ಮಾಡಲಾಗಿದೆ.
ಇದರ ಪರಿಣಾಮ ಕ್ವೀನ್ಸ್ ರಸ್ತೆ, ಎಂ.ಜಿ ರೋಡ್, ಅನಿಲ್ ಕುಂಬ್ಳೆ ವೃತ್ತ, ಲಿಂಕ್ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಟಿ ಚೌಡಯ್ಯ ರಸ್ತೆ ಮತ್ತು ಸೆಂಟ್ರಲ್ ಸ್ಟ್ರೀಟ್‍ನಲ್ಲಿ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 11.30 ರ ತನಕ ಪಾರ್ಕಿಂಗ್ ನಿಷೇಧ ಮಾಡಲಾಗಿದೆ.
ಈ ಎಲ್ಲಾ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ, ಶಾಂತಿನಗರ ಬಸ್ ನಿಲ್ದಾಣ, ಶಿವಾಜಿನಗರ ಬಸ್ ನಿಲ್ದಾಣ, ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಮಲ್ಯ ಆಸ್ಪತ್ರೆ ರಸ್ತೆ ಮತ್ತು ಸೆಂಟ್ ಜೋಸೆಫ್ ಬಾಲಕ ಶಾಲೆ ಮ್ಯೂಸಿಯಂ ರಸ್ತೆಯಲ್ಲಿ ಪಾರ್ಕಿಂಗ್ ಗೆ ಅವಕಾಶ ಮಾಡಿಕೊಡಲಾಗಿದೆ. ಇದರ ಜೊತೆಗೆ ಕ್ವೀನ್ ರಸ್ತೆ, ಕಬ್ಬನ್ ರಸ್ತೆ, ಬಿ.ಆರ್.ವಿ ಜಂಕ್ಷನ್, ಎಂ.ಜಿ ರೋಡ್‍ನಲ್ಲಿ ಮಧ್ಯಾಹ್ನ 11 ಗಂಟೆಯಿಂದ ರಾತ್ರಿ 11 ರ ತನಕ ಆಟೋ ಸಂಚಾರ ನಿಷೇಧ ಮಾಡಲಾಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದ್ದು, ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ತಂಡ ಹತ್ತು ವಿಕೆಟ್‍ಗಳ ಅಂತರದಲ್ಲಿ ಗೆದ್ದು ಬೀಗಿದರೆ, ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ 36 ರನ್‍ಗಳ ಅಂತರದಲ್ಲಿ ಗೆದ್ದು ಸೇಡು ತೀರಿಸಿಕೊಂಡಿದೆ. ಸರಣಿಯನ್ನು ಗೆಲ್ಲಲು ನಾಳೆ ಬೆಂಗಳೂರಿನಲ್ಲಿ ನಡೆಯುವ ಪಂದ್ಯ ನಿರ್ಣಾಯಕವಾಗಿದ್ದು, ನಾಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈವೋಲ್ಟೆಜ್ ಕದನ ನಡೆಯಲಿದೆ.