ಬೆಂಗಳೂರು: ಸಿಲಿಕಾನ್ ಸಿಟಿ ಹೊರವಲಯದಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ. ನಗರದ ಹೊರವಲಯದ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯನ್ನು ಬೆದರಿಸಿ ಚಿನ್ನಾಭರಣ, ಮೊಬೈಲ್, ಹಣ ಸೇರಿ ಒಂದು ಲಕ್ಷ ಬೆಲೆಬಾಳುವ ವಸ್ತುಗಳ ಕಸಿದು ಎಸ್ಕೇಪ್ ಆಗಿದ್ದಾರೆ.
ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಬರೋ ಖದೀಮರು, ಸಂಜೆ ವೇಳೆ ಒಂಟಿಯಾಗಿ ಓಡಾಡೋರನ್ನು ಟಾರ್ಗೆಟ್ ಮಾಡಿ ಅಡ್ಡಗಟ್ಟಿ ಚಿನ್ನಾಭರಣ ದೋಚುತ್ತಾರೆ. ಕೃತ್ಯದ ವೇಳೆ ಏನಾದರೂ ವಿರೋಧ ವ್ಯಕ್ತಪಡಿಸಿದರೆ ಚಾಕುವಿಂದ ಹಲ್ಲೆ ಮಾಡಿ ಚಿನ್ನಾಭರಣ ಕಸಿದು ಎಸ್ಕೇಪ್ ಆಗುತ್ತಾರೆ. ಸರಗಳ್ಳರನ್ನು ತಡೆಯಲು ಹೋದವರಿಗೆ ಚಾಕುವಿನಿಂದ ಹಲ್ಲೆ ಮಾಡಲು ಮುಂದಾಗುತ್ತಾರೆ ಎಂಬ ಭಯದಿಂದ ಯಾರು ಕೂಡ ಸರಗಳ್ಳರನ್ನು ಹಿಡಿಯುವ ಪ್ರಯತ್ನವನ್ನು ಮಾಡುತ್ತಿಲ್ಲ.
Advertisement
Advertisement
ಇಲ್ಲಿನ ಕಾಡ ಅಗ್ರಹಾರದ ರಸ್ತೆಯಲ್ಲಿ ಕಳೆದ ಒಂದು ವಾರದಲ್ಲಿ ನಾಲ್ಕು ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಒಂಟಿಯಾಗಿ ಓಡಾಡೋಕೆ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಸ್ಥಳೀಯ ಸಿಸಿಟಿವಿ ಅಧಾರದ ಮೇಲೆ ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.