ಬೆಂಗಳೂರು: ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪುತ್ರನ ಹಸ್ತಕ್ಷೇಪ ಸರ್ಕಾರ ಮತ್ತು ಪಕ್ಷದಲ್ಲಿ ಜಾಸ್ತಿಯಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಈಗ ವಿಜಯೇಂದ್ರ ಈ ವಿಚಾರದಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರು ನೇರವಾಗಿಯೇ ವಿಜಯೇಂದ್ರ ಬಗ್ಗೆ ಗಂಭೀರ ಆರೋಪ ಮಾಡಿ ಬಿಎಸ್‍ವೈ ಪುತ್ರ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದರು. ಇಷ್ಟೇ ಅಲ್ಲದೇ ಹಲವು ಬಾರಿ ಯಡಿಯೂರಪ್ಪನವರ ಜೊತೆಗೆ ವಿಜಯೇಂದ್ರ ಕಾಣಿಸಿಕೊಳ್ಳುತ್ತಿದ್ದರು. ಈ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ವಿಜಯೇಂದ್ರ ಯಡಿಯೂರಪ್ಪನವರಿಂದ ಅಂತರ ಕಾಯ್ದುಕೊಂಡಿದ್ದಾರೆ.
ಸ್ವಲ್ಪ ದಿನ ಸೈಲೆಂಟಾಗಿ ದೂರ ಇರುವಂತೆ ಮಗನಿಗೆ ಯಡಿಯೂರಪ್ಪ ಸಲಹೆ ನೀಡಿದ್ದು, ಪಕ್ಷ, ಸರ್ಕಾರ ಎರಡರಲ್ಲೂ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ. ಹಾಗಾಗಿ ಕಳೆದ ನಾಲ್ಕೈದು ದಿನಗಳಿಂದ ಬಿಎಸ್‍ವೈ ಅವರಿಂದ ವಿಜಯೇಂದ್ರ ಅಂತರ ಕಾಯ್ದುಕೊಂಡಿದ್ದಾರೆ. ಪುತ್ರನ ಮಧ್ಯಪ್ರವೇಶ ನಡೆಯುತ್ತಿಲ್ಲ. ತಮಗೆ ಆಗದವರು ಹರಡಿಸಿದ ಸುದ್ದಿ ಇದು ಹೈಕಮಾಂಡ್ ನಾಯಕರಿಗೆ ಸಂದೇಶ ರವಾನಿಸಲು ತಂದೆಯ ಸಲಹೆಯ ಮೇರೆಗೆ ವಿಜಯೇಂದ್ರ ಹೊರಗೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ.
ವಿಜಯೇಂದ್ರ ಮೇಲೆ ಸಂತೋಷ್ ಕಣ್ಣು?
ರಾಜ್ಯ ಬಿಜೆಪಿಯ ಪ್ರಧಾನಕಾರ್ಯದರ್ಶಿ ಹುದ್ದೆಯ ಮೇಲೆ ವಿಜಯೇಂದ್ರ ಕಣ್ಣಿಟ್ಟಿದ್ದರು. ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಗೇರುವ ಮೂಲಕ ಪಕ್ಷದಲ್ಲಿ ಉನ್ನತ ಸ್ಥಾನ ಅಲಂಕರಿಸಲು ವಿಜಯೇಂದ್ರ ಲಾಬಿ ನಡೆಸಿದ್ದರು ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಹೇಶ್ ಟೆಂಗಿನಕಾಯಿ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡುವ ಮೂಲಕ ಪಕ್ಷದ ಮಂದಿಗೆ ಶಾಕ್ ನೀಡಿದ್ದರು.
ಯಡಿಯೂರಪ್ಪನವರ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಿಎಸ್‍ವೈ ಆಪ್ತರಿಗೆ ಸಿಗಲಿದೆ ಎನ್ನುವ ವಿಚಾರ ಚರ್ಚೆ ಆಗುತಿತ್ತು. ಆದರೆ ಬಿಜೆಪಿ ಹೈಕಮಾಂಡ್ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ರಾಜ್ಯದ ಹಿರಿಯ ನಾಯಕರಿಗೆ ಶಾಕ್ ನೀಡಿತ್ತು. ಈ ಎರಡು ಹುದ್ದೆಗೆ ಆಯ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಅಣತಿಯಂತೆ ನಡೆದಿದ್ದು ಎನ್ನುವ ಮಾತು ಈಗ ಬಿಜೆಪಿ ವಲಯದಲ್ಲಿ ಚರ್ಚೆ ಆಗುತ್ತಿದೆ.
ವಿಜಯೇಂದ್ರ ಅವರಿಗೆ ಪ್ರಧಾನಕಾರ್ಯದರ್ಶಿ ಹುದ್ದೆ ನೀಡಿದರೆ ಮತ್ತೆ ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಬರುತ್ತದೆ. ದೆಹಲಿ ಮಟ್ಟದ ಸಂಸ್ಕೃತಿ ತರಲು ಈ ಎಲ್ಲ ಆಯ್ಕೆ ನಡೆದಿದೆ ಎಂದು ಬಿಜೆಪಿಯ ಕೆಲವರು ಈ ನಿರ್ಧಾರ ಪರ ಮಾತನಾಡುತ್ತಿದ್ದಾರೆ. ಇನ್ನು ಕೆಲ ನಾಯಕರು ಬಿಎಸ್‍ವೈ ಬೆಂಬಲಿಗರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲು ನಳಿನ್ ಕುಮಾರ್ ಮೂಲಕ ಸಂತೋಷ್ ತಮ್ಮ ದಾಳವನ್ನು ಪ್ರಯೋಗಿಸುತ್ತಿದ್ದಾರೆ. ಮತ್ತೊಬ್ಬ ಲಿಂಗಾಯತ ನಾಯಕನ್ನು ಬೆಳೆಸಲು ಮಹೇಶ್ ಟೆಂಗಿನಕಾಯಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾತನ್ನಾಡುತ್ತಿದ್ದಾರೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಒಂದೊಂದು ಆಯ್ಕೆಯ ವಿಚಾರದ ಬಗ್ಗೆ ನಾಯಕರ ನಡುವೆ ಭಾರೀ ಚರ್ಚೆ ಆಗುತ್ತಿದೆ.