ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಸದ್ಯಕ್ಕೆ ಶುಭ ಕಾಲ ಕೂಡಿ ಬರುವ ಲಕ್ಷಣ ಕಾಣುತ್ತಿಲ್ಲ. ಯಾಕಂದ್ರೆ ಈ ಬಾರಿಯೂ ಸಿಎಂ ಯಡಿಯೂರಪ್ಪ ಅವರ ದೆಹಲಿ ಭೇಟಿಗೆ ಹೈಕಮಾಂಡ್ ಒಪ್ಪಿಗೆ ಸಿಕ್ಲಿಲ್ಲ. ಕೊನೆಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಿಎಸ್‍ವೈಗೆ ದೆಹಲಿಯಲ್ಲಿ ಅಪಾಯಿಂಟ್ಮೆಂಟ್ ಕೊಡಲೇ ಇಲ್ಲ. ಸಂಪುಟ ವಿಸ್ತರಣೆಗಾಗಿ ಹೈಕಮಾಂಡ್ ಭೇಟಿಗೆ ಜನವರಿ 12 ರಂದು ಅಂದರೆ ನಾಳೆಗೆ ಯಡಿಯೂರಪ್ಪ ಅವರು ಅಮಿತ್ ಶಾ ಸಮಯ ಕೇಳಿದ್ದರು. ಆದರೆ ಸಂಪುಟ ವಿಸ್ತರಣೆ ಇರಲಿ ಸಿಎಂ ಅವರನ್ನು ದೆಹಲಿಗೆ ಬಂದು ಭೇಟಿ ಮಾಡಲು ಸಹ ಅಮಿತ್ ಶಾ ಒಪ್ಪಿಗೆ ಕೊಡಲಿಲ್ಲ. ಇದೇ 18 ರಂದು ಹುಬ್ಬಳ್ಳಿಯಲ್ಲಿ ಸಿಎಎ ಕುರಿತ ಬಿಜೆಪಿ ಬೃಹತ್ ರ್ಯಾಲಿಯಿದ್ದು, ಅಮಿತ್ ಶಾ ಆಗಮಿಸುತ್ತಿದ್ದಾರೆ. ಹಾಗಾಗಿ ಹುಬ್ಬಳ್ಳಿಯಲ್ಲೇ ಅಮಿತ್ ಶಾ ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ಕೇಳಲು ಸಿಎಂ ನಿರ್ಧರಿಸಿದ್ದಾರೆ.
Advertisement
ಇಂದು ಬೆಳಗ್ಗೆ ತಮ್ಮ ಧವಳಗಿರಿ ನಿವಾಸದಲ್ಲಿ ದೆಹಲಿ ಪ್ರವಾಸ ರದ್ದಾದ ಬಗ್ಗೆ ಸಿಎಂ ಯಡಿಯೂರಪ್ಪ ಮಾತಾಡಿದರು. ದೆಹಲಿಯಲ್ಲಿ ಅಮಿತ್ ಶಾ ಭೇಟಿಗೆ ಅವಕಾಶ ಸಿಕ್ಕಿಲ್ಲ. ಹೇಗಿದ್ದರೂ ಅಮಿತ್ ಶಾ ಅವರೇ ರಾಜ್ಯಕ್ಕೆ ಬರುತ್ತಿದ್ದಾರೆ. ಜನವರಿ 17, 18 ಕ್ಕೆ ಅಮಿತ್ ಶಾ ರಾಜ್ಯಕ್ಕೆ ಬರುತ್ತಿದ್ದಾರೆ. ಅವರು ರಾಜ್ಯಕ್ಕೆ ಬಂದಾಗ ಇಲ್ಲೇ ಭೇಟಿ ಮಾಡಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡುತ್ತೇನೆ. ಅವರ ಜೊತೆ ಚರ್ಚಿಸಿ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
Advertisement
ಬಿಎಸ್‍ವೈ ದೆಹಲಿ ಭೇಟಿಗೆ ಅಮಿತ್ ಶಾ ನಿರಾಕರಣೆ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮತ್ತೆ ಭಾರೀ ನಿರಾಸೆಯಾಗಿದೆ. ನಾಳೆ ಅಮಿತ್ ಶಾ ಜೊತೆ ಸಿಎಂ ಚರ್ಚೆ ನಡೆಸಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯುತ್ತಾರೆ ಎಂದು ಆಕಾಂಕ್ಷಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು. ನಾಳೆಗೆ ತಮ್ಮ ವನವಾಸ ಮುಗಿಯುತ್ತದೆ ಎಂದೇ ಅಂದುಕೊಂಡಿದ್ದರು. ಆದರೆ ಅರ್ಹ ಶಾಸಕರು ಮತ್ತು ಪಕ್ಷದ ಆಕಾಂಕ್ಷಿ ಶಾಸಕರ ನಿರೀಕ್ಷೆ ಮತ್ತೆ ಠುಸ್ ಆಗಿದೆ.
Advertisement
Advertisement
ಯಡಿಯೂರಪ್ಪರ ದೆಹಲಿ ಪ್ರವಾಸ ರದ್ದು ಬೆನ್ನಲ್ಲೇ ಇದೇ ತಿಂಗಳು ಸಂಪುಟ ವಿಸ್ತರಣೆ ನಡೆಯುತ್ತಾ ಅನ್ನೋ ಭರವಸೆಯನ್ನು ಸಚಿವ ಸ್ಥಾನದ ಆಕಾಂಕ್ಷಿಗಳು ಕಳೆದುಕೊಂಡಿದ್ದಾರೆ. ಇದೇ 18 ಕ್ಕೆ ರಾಜ್ಯಕ್ಕೆ ಅಮಿತ್ ಶಾ ಆಗಮಿಸುತ್ತಿದ್ದು, ಈಗಲಾದರೂ ಸಂಪುಟ ವಿಸ್ತರಣೆಗೆ ಅಮಿತ್ ಶಾ ಒಪ್ಪಿಗೆ ಕೊಡ್ತಾರಾ ಅನ್ನೋ ಅನುಮಾನ ಈಗ ಆಕಾಂಕ್ಷಿಗಳಲ್ಲಿ ಕಾಡುತ್ತಿದೆ.