ಬೆಂಗಳೂರು: ಯುವಕ ಪ್ರೀತಿ ನಿರಾಕರಿಸಿದ್ದಕ್ಕೆ ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ ಹುಸಿಬಾಂಬ್ ಬೆದರಿಕೆ ಹಾಕಿದ್ದ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಿಯಕರನಿಂದ ಪ್ರೇಮ ವಂಚನೆಗೊಳಗಾದ ಸಾಫ್ಟ್‌ವೇರ್ ಎಂಜಿನಿಯರ್ ರೆನಿ ಜೊಶೀಲ್ಡಾ ಪ್ರಮುಖ ಆರೋಪಿಯಾಗಿದ್ದು, ಉತ್ತರ ವಿಭಾಗದ ಸೆನ್ ಪೊಲೀಸರು ಬಂಧಿಸಿದ್ದಾರೆ. ಆರೋಪಿತೆ ಗುಜರಾತ್ ಅಹಮದಾಬಾದ್ ಕೇಂದ್ರ ಕಾರಾಗೃಹದಲ್ಲಿ ಇದ್ದುಕೊಂಡು ಬಾಂಬ್ ಬೆದರಿಕೆ ಹಾಕಿದ್ದಳು.
ಆರೋಪಿತೆ ಸಾಫ್ಟ್‌ವೇರ್ ಇಂಜಿನಿಯರ್ ಉದ್ಯೋಗಿ. ಬೆಂಗಳೂರಿನ ಪಬ್ಲಿಕ್ ಶಾಲೆಯೊಂದಕ್ಕೆ ಇಮೇಲ್ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಳು. ಜೂ.14 ರಂದು ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಗೆ ಬಾಂಬ್ ಬೆದರಿಕೆ ಕರೆಬಂದಿತ್ತು. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸ್ ಆಯುಕ್ತರು, ಉತ್ತರ ವಿಭಾಗ ಸೈಬರ್ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಿದ್ದರು.
ಆರೋಪಿತೆ VPN, ಇಂಟರನೆಟ್ ಬಳಕೆ ಮಾಡುತ್ತಿದ್ದಳು. ಗೇಟ್ ಕೋಡ್ ಎಂಬ ಅಪ್ಲೀಕೇಶನ್‌ನ ವರ್ಚುವಲ್ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಿದ್ದಳು. ಸುಮಾರು ಆರರಿಂದ ಏಳು ವಾಟ್ಸಪ್ ಖಾತೆಗಳನ್ನು ನಿರ್ವಹಣೆ ಮಾಡುತ್ತಿದ್ದಳು. ಬಾಂಡಿ ವಾರೆಂಟ್ ಮುಖಾಂತರ ಗುಜರಾತ್‌ನಿಂದ ಕರೆದುಕೊಂಡು ಬಂದು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಬೆಂಗಳೂರಿನ ಕಲಾಸಿಪಾಳ್ಯ ಸೇರಿ ಇತರೆ ಆರು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆರೋಪಿತಳ ವಿರುದ್ಧ ಗುಜರಾತ್, ಮೈಸೂರು, ತಮಿಳುನಾಡಿನ ಚೆನ್ನೈನಲ್ಲಿ ಹುಸಿಬಾಂಬ್ ಬೆದರಿಕೆ ಪ್ರಕರಣ ದಾಖಲಾಗಿದೆ.
ಆರೋಪಿತೆಯ ಪ್ರೀತಿ ನಿರಾಕರಣೆ ಮಾಡಿದ ಯುವಕನ ಸಂಕಷ್ಟಕ್ಕೆ ಸಿಕ್ಕಿಸಲು ಈ ಕೃತ್ಯ ಎಸಗಿದ್ದಾಳೆ. ಯುವಕನ ಇಮೇಲ್ ಐಡಿ ಬಳಸಿಕೊಂಡು ಹುಸಿಬಾಂಬ್ ಇಮೇಲ್ ಬೆದರಿಕೆ ಕಳಿಸಿದ್ದಳು. ಯುವಕನನ್ನ ಪದೇ ಪದೇ ಪ್ರೀತಿ ಮಾಡುವಂತೆ ಒತ್ತಾಯ ಮಾಡ್ತಿದ್ದಳು. ಆರೋಪಿತೆಯ ಪ್ರೀತಿ ಮತ್ತು ಗೆಳೆತನವನ್ನು ಯುವಕ ನಿರಾಕರಿಸಿದ್ದ. ಇದೇ ದ್ವೇಷಕ್ಕೆ ಆತನ ಹೆಸರಲ್ಲಿ ಹುಸಿಬಾಂಬ್ ಬೆದರಿಕೆ ಕಳುಹಿಸಿದ್ದಾಳೆ.
ಬೆಂಗಳೂರಿನ ಆರರಿಂದ ಏಳು ಶಾಲೆಗಳಿಗೆ ಹುಸಿಬಾಂಬ್ ಇಮೇಲ್ ಮಾಡಿದ್ದಳು. ಅಷ್ಟೇ ಅಲ್ಲದೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗೆ ಬಾಂಬ್ ಬೆದರಿಕೆ ಹಾಕಿದ್ದಳು. ಗುಜರಾತ್‌ನ ವಿಮಾನ ದುರಂತದ ಹಾಗೆ ನಿಮ್ಮ ಶಾಲೆಗಳನ್ನ ಉಡಾಯಿಸುವುದಾಗಿ ಬೆದರಿಕೆ ಹಾಕಿದ್ದಳು. ಸದ್ಯ ಕೂಲಂಕುಷವಾಗಿ ಆರೋಪಿತೆಯ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

