ಬೆಂಗಳೂರು: ನಗರದ ನಾಗರಿಕರಿಗೆ ಬಿಬಿಎಂಪಿ ತೆರಿಗೆ ಮೇಲೆ ಮತ್ತೆ ತೆರಿಗೆ ಬರೆ ಹಾಕಿದೆ. ಸಾರ್ವಜನಿಕರ ಜೇಬಿಗೆ ಪಾಲಿಕೆ ಕತ್ತರಿ ಹಾಕಿದ್ದು, ಶೇಕಡಾ ಎರಡರಷ್ಟು ಹೆಚ್ಚುವರಿ ಸೆಸ್ ಕಟ್ಟುವ ಬಗ್ಗೆ ಬಿಬಿಎಂಪಿ ಇಂದಿನ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದೆ.
ಆಸ್ತಿ ತೆರಿಗೆ ಜೊತೆಯಲ್ಲೇ, ಈಗಾಗಲೇ ಘನತ್ಯಾಜ್ಯ, ಭಿಕ್ಷುಕರ ಸೆಸ್, ಗ್ರಂಥಾಲಯ ಸೆಸ್‍ಗಳು ಇವೆ. ಇವುಗಳ ಸಾಲಿಗೆ ಭೂಸಾರಿಗೆ ಸೆಸ್ ಸೇರ್ಪಡೆಯಾಗಿದೆ. ಈ ಹಿಂದೆಯೇ ಸಾಕಷ್ಟು ವಿವಾದ ಸೃಷ್ಟಿಸಿದ್ದ, ಭೂಸಾರಿಗೆ ಸೆಸ್ ಕಾಂಗ್ರೆಸ್ ಅವಧಿಯಲ್ಲಿ ಜಾರಿಗೆ ತರದಂತೆ ಬಿಜೆಪಿಯೇ ವಿರೋಧಿಸಿತ್ತು.
Advertisement
Advertisement
ರಸ್ತೆಯಲ್ಲಿ ಓಡಾಡುವ ವಾಹನಗಳಿಂದ ರಸ್ತೆಗಳು ಬೇಗ ಹಾಳಾಗುತ್ತಿವೆ. ಹೀಗಾಗಿ ರಸ್ತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬಿಬಿಎಂಪಿ ಈ ಸೆಸ್ ಅಳವಡಿಸಲು ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವವರಿಗೆ ಇದು ನೇರವಾಗಿ ಹೊರೆಯಾಗಿ ಬೀಳಲಿದೆ. ಏಪ್ರಿಲ್ ತಿಂಗಳಲ್ಲಿ ಆಸ್ತಿ ತೆರಿಗೆ ಪಾವತಿಸುವವರು ಇದರ ಜತೆಗೆ ಭೂ ಸಾರಿಗೆ ತೆರಿಗೆ ಸಹ ಕಟ್ಟಬೇಕಾಗುತ್ತದೆ.
Advertisement
ಸದ್ಯ ಪ್ರಾಥಮಿಕ ಹಂತದಲ್ಲಿ ಸೆಸ್ ಮಾತ್ರ ಜಾರಿಗೆ ತರಲು ತೀರ್ಮಾನಿಸಿದ್ದು, ಅಧಿಕಾರಿಗಳ ತಂಡ ಭೂ ಸಾರಿಗೆ ತೆರಿಗೆಯ ರೂಪುರೇಷೆಯನ್ನು ಸಿದ್ಧಪಡಿಸಿದ್ದಾರೆ. ಬೆಂಗಳೂರಿನ ನಾಗರಿಕರಿಂದ ವಾರ್ಷಿಕ 150 ಕೋಟಿ ಹೆಚ್ಚಿನ ಆದಾಯದ ನಿರೀಕ್ಷೆ ಇದೆ. ಹೆಚ್ಚುವರಿ ಭೂಸಾರಿಗೆ ಕರವನ್ನು ಸರ್ಕಾರಕ್ಕೆ ಅಥವಾ ಸಾರಿಗೆ ಇಲಾಖೆಗೆ ನೀಡದೆ ಅದೇ ಹಣವನ್ನು ಮತ್ತೆ ರಸ್ತೆ ಅಭಿವೃದ್ಧಿಗೆ ಬಿಬಿಎಂಪಿಯೇ ಬಳಸಲು ನಿರ್ಧಾರಿಸಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದರು.
Advertisement
ಇನ್ನೊಂದೆಡೆ ಭೂಸಾರಿಗೆ ಸೆಸ್ ಅನ್ನು ವಿಪಕ್ಷ ತೀವ್ರವಾಗಿ ಖಂಡಿಸಿದೆ. ಜನರಿಗೆ ಟೋಪಿ ಹಾಕಿ ದರ್ಬಾರ್ ಮಾಡಲು ಬಿಬಿಎಂಪಿ ಆಡಳಿತ ಮುಂದಾಗಿದೆ. ಜನರಿಗೆ ಹೊರೆಹಾಕಲು ಕಾಂಗ್ರೆಸ್ ಬಿಡುವುದಿಲ್ಲ. ಭೂ ಸಾರಿಗೆ ಸೆಸ್ ವಿರೋಧಿಸಿ ಕಾಂಗ್ರೆಸ್ ನಾಳೆ ಪ್ರತಿಭಟನೆ ನಡೆಸಲಿದೆ. ಕೌನ್ಸಿಲ್ ಸಭೆ ಆರಂಭಕ್ಕೂ ಮೊದಲೇ ಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ವಿಪಕ್ಷ ನಾಯಕ ವಾಜಿದ್ ತಿಳಿಸಿದರು.