– 17 ಕಸ ಗುಡಿಸೋ ಯಂತ್ರಗಳ ಖರೀದಿ
– 1 ಯಂತ್ರಕ್ಕೆ 1.36 ಕೋಟಿ ರೂ.
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳನ್ನು ಸ್ವಚ್ಛವಾಗಿಡಲು ಹೊಸದಾಗಿ ಖರೀದಿಸಿರುವ ಕಸ ಗುಡಿಸುವ ಯಂತ್ರಗಳು ಹಾಗೂ ಅಗರ ರಸ್ತೆಯಲ್ಲಿ ಕೈಗೆತ್ತಿಕೊಂಡಿರುವ ಹೈ ಡೆನ್ಸಿಟಿ ಕಾರಿಡಾರ್ ಯೋಜನೆ ಪ್ರಗತಿ ಕಾಮಗಾರಿಯನ್ನು ಇಂದು ಮೇಯರ್ ತಪಾಸಣೆ ನಡೆಸಿದರು. ಈ ವೇಳೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ಉಪಮೇಯರ್ ರಾಮಮೋಹನ್ ರಾಜು, ವಲಯ ಜಂಟಿ ಆಯುಕ್ತರ ರಾಮಕೃಷ್ಣ ಉಪಸ್ಥಿತರಿದರು.
ಬಿಬಿಎಂಪಿ ವ್ಯಾಪ್ತಿಯ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ಹಾಗೂ ಪ್ರಮುಖ ರಸ್ತೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಹೊಸದಾಗಿ 17 ಯಂತ್ರಗಳನ್ನು ಖರೀದಿಸಲಾಗಿದ್ದು, ಈಗಾಗಲೇ 15 ಯಂತ್ರಗಳು ನಗರಕ್ಕೆ ಬಂದಿವೆ. ಹೆಚ್.ಎಸ್.ಆರ್ ಲೇಔಟ್‍ನಲ್ಲಿ ಹೊಸದಾಗಿ ಖರೀದಿಸಿರುವ 15 ಕಸ ಗುಡಿಸುವ ಯಂತ್ರಗಳನ್ನು ತಪಾಸಣೆ ನಡೆಸಿದರು.
Advertisement
Advertisement
ಪಾಲಿಕೆ ಎಲ್ಲಾ 8 ವಲಯಗಳಿಗೂ ಅಗತ್ಯಕ್ಕೆ ತಕ್ಕಂತೆ ಹಂಚಿಕೆ ಮಾಡಿ ಪ್ರತಿನಿತ್ಯವೂ ಯಂತ್ರಗಳ ಮೂಲಕ ರಸ್ತೆಗಳನ್ನು ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. 1 ಕಸ ಗುಡಿಸುವ ಯಂತ್ರಕ್ಕೆ 1.36 ಕೋಟಿ ರೂ.ಗಳಂತೆ ಒಟ್ಟು 23.28 ಕೋಟಿ ರೂ. ವೆಚ್ಚದಲ್ಲಿ 17 ಯಂತ್ರಗಳನ್ನು ಖರೀದಿಸಲಾಗಿದೆ. ಈಗಾಗಲೇ ನಗರಕ್ಕೆ 15 ಯಂತ್ರಗಳು ಬಂದಿದ್ದು, ಉಳಿದೆರಡು ಯಂತ್ರಗಳು ಶೀಘ್ರ ಬರಲಿವೆ. ಯಾವ್ಯಾವ ರಸ್ತೆಗಳಲ್ಲಿ ಯಂತ್ರಗಳ ಮೂಲಕ ಸ್ವಚ್ಛಗೊಳಿಸಬೇಕು ಎಂಬ ಪಟ್ಟಿಯನ್ನು ಸಿದ್ದಪಡಿಸಲಾಗಿದೆ.
Advertisement
ನಂತರ ಅಗರ ಜಂಕ್ಷನ್ ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಹೈ ಡೆನ್ಸಿಟಿ ಕಾರಿಡಾರ್(ಅತೀ ಹೆಚ್ಚು ವಾಹನಗಳು ಓಡಾಡುವ ಮಾರ್ಗ ಅಥವಾ ಸುಗಮ ಸಂಚಾರಕ್ಕೆ ತೊಡಕಾಗುವ ಮಾರ್ಗ) ಪ್ರಗತಿ ಕಾಮಗಾರಿ ತಪಾಸಣೆ ನಡೆಸಲಾಯಿತು.
Advertisement
ಅಗರ ಜಂಕ್ಷನ್ ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಈಗಾಗಲೇ ಡಾಂಬರೀಕರಣ ಮಾಡಲಾಗಿದ್ದು, ಸರ್ವೀಸ್ ರಸ್ತೆ, ಪಾದಚಾರಿ ಮಾರ್ಗ ಹಾಗೂ ಚರಂಡಿ ದುರಸ್ತಿ ಕಾಮಗಾರಿಗೆ ವೇಗ ನೀಡಿ ನಿಗದಿತ ಸಮಯದಲ್ಲಿ ಮುಗಿಸಬೇಕು. ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮೇಯರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
12 ಹೈ ಡೆನ್ಸಿಟಿ ಕಾರಿಡಾರ್‍ಗಳ ವಿವರ:
* ಬಳ್ಳಾರಿ ರಸ್ತೆ (ಚಾಲುಕ್ಯ ವೃತ್ತದಿಂದ ಹೆಬ್ಟಾಳ)
* ಹಳೇ ಮದ್ರಾಸ್ ರಸ್ತೆ (ಟ್ರಿನಿಟಿ ವೃತ್ತದಿಂದ ಕೆ.ಆರ್.ಪುರಂ)
* ಹಳೇ ಏರ್‍ಪೋರ್ಟ್ ರಸ್ತೆ (ಎಎಸ್‍ಸಿ ಸೆಂಟರ್‍ನಿಂದ ಕಾಡುಗೋಡಿ)
* ಸರ್ಜಾಪುರ ರಸ್ತೆ (ಹೊಸೂರು ರಸ್ತೆಯ ಸೆಂಟ್ ಜಾನ್ಸ್ ಆಸ್ಪತ್ರೆಯಿಂದ ಕಾರ್ಮೆಲಾರಾಂ ಸೇತುವೆ)
* ಹೊಸೂರು ರಸ್ತೆ (ವೆಲ್ಲಾರ ಜಂಕ್ಷನ್‍ನಿಂದ ಸಿಲ್ಕ್ ಬೋರ್ಡ್)
* ಬನ್ನೇರುಘಟ್ಟ ರಸ್ತೆ(ಡೈರಿ ವೃತ್ತದಿಂದ ನೈಸ್ ರಸ್ತೆ)
* ಕನಕಪುರ ರಸ್ತೆ(ಕೆ.ಆರ್.ರಸ್ತೆಯಿಂದ ನೈಸ್ ರಸ್ತೆ)
* ಮೈಸೂರು ರಸ್ತೆ (ಹಡ್ಸನ್ ವೃತ್ತದಿಂದ ಜ್ಞಾನಭಾರತಿ ಜಂಕ್ಷನ್)
* ಮಾಗಡಿ ರಸ್ತೆ (ಹಳೇ ಬಿನ್ನಿ ಮಿಲ್‍ನಿಂದ ಅಚಿಜನಾ ನಗರ-ನೈಸ್ ರಸ್ತೆ)
* ತುಮಕೂರು ರಸ್ತೆ (ಓಕಳಿಪುರಂನಿಂದ ಗೊರಗುಂಟೆ ಪಾಳ್ಯ)
* ವೆಸ್ಟ್ ಆಫ್ ಕಾರ್ಡ್ ರಸ್ತೆ (ಸೋಪ್ ಫ್ಯಾಕ್ಟರಿಯಿಂದ ಮೈಸೂರುರಸ್ತೆ)
* ಹೊರ ವರ್ತುಲ ರಿಂಗ್ ರಸ್ತೆ(ಗೊರಗುಂಟೆ ಪಾಳ್ಯ-ತುಮಕೂರು ರಸ್ತೆ-ಹೆಬ್ಬಾಳ-ಕೆ.ಆರ್.ಪುರಂ-ಮಾರತಹಳ್ಳಿ-ಜೆ.ಡಿ.ಮರ ಜಂಕ್ಷನ್-ನೈಸ್ ರಸ್ತೆ ಜಂಕ್ಷನ್-ನಾಯಂಡಹಳ್ಳಿ ಜಂಕ್ಷನ್-ಕೊಟ್ಟಿಗೆಪಾಳ್ಯ ಜಂಕ್ಷನ್-ಗೊರಗುಂಟೆಪಾಳ್ಯ ರಸ್ತೆಯವರೆಗೆ)ಯನ್ನು ಹೈ ಡೆನ್ಸಿಟಿ ಕಾರಿಡಾರ್ ಎಂದು ಗುರುತಿಸಲಾಗಿದೆ.