ಬೆಂಗಳೂರು: ರಾಜ್ಯದ ನೆರೆಗೆ ಪರಿಹಾರ ಕೊಡದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸಂಸದರ ವಿರುದ್ಧ ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, 25 ಸಂಸದರು ಆಯ್ಕೆ ಆಗಿದ್ದಾರೆ. ರಾಜ್ಯದ ಪರ ಧ್ವನಿ ಎತ್ತೋದು ಅವರ ಕರ್ತವ್ಯ. ನಾಡಿನ ಹಿತ ಕಾಪಾಡೋದು ಸಂಸದರ ಕೆಲಸ. ನಮ್ಮನ್ನ ಆಯ್ಕೆ ಮಾಡಿದ ಜನ ನಮಗೆ ಮೊದಲು. ಸಂಸದರು ಪ್ರಧಾನಿ ಬಳಿ ನಮ್ಮನ್ನ ಕರೆದುಕೊಂಡು ಹೋಗುವ ಕೆಲಸ ಮಾಡಬೇಕು. ಪ್ರಧಾನಿಗಳು ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.
Advertisement
Advertisement
ಕೇಂದ್ರದ ಈ ವರ್ತನೆಯಿಂದ ರಾಜ್ಯದ ಜನರಿಗೆ ತಪ್ಪು ಸಂದೇಶ ಹೋಗುತ್ತಿದೆ. ಪ್ರಧಾನಿಗಳು ಈ ಬಗ್ಗೆ ಸೂಕ್ತ ನಿರ್ಧಾರ ಮಾಡಬೇಕು ಅಂತ ಮನವಿ ಮಾಡಿದರು. ಯಾವ ಮುಖ ಇಟ್ಟುಕೊಂಡು ಉತ್ತರ ಕರ್ನಾಟಕದ ಜನರಿಗೆ ಉತ್ತರ ಹೇಳಿಬೇಕು ನಾವು. ಉತ್ತರ ಕರ್ನಾಟಕ ಜನ ಈಗ ಬಿಜೆಪಿ ಶಾಸಕರು, ಸಂಸದರು ಅಂದರೆ ಹೊಡೆಯೋಕೆ ಬರುತ್ತಾರೆ ಅಂತ ಅಸಹಾಯಕತೆ ವ್ಯಕ್ತಪಡಿಸಿದರು. ಇದನ್ನು ಓದಿ: ಉತ್ತರ ಕರ್ನಾಟಕದ ಕಣ್ಣೀರು ಕರ್ನಾಟಕದ ಸಂಸದರಿಗೆ ಯಾಕೆ ಕಾಣುತ್ತಿಲ್ಲ: ಸೂಲಿಬೆಲೆ ಪ್ರಶ್ನೆ
Advertisement
ಕರ್ನಾಟಕಜನರ ಭಾವನೆಗೆ ಪ್ರಧಾನಿಗಳು ಸ್ಪಂದಿಸಬೇಕು. ಇಷ್ಟೆಲ್ಲ ಆದರೂ ನಮಗೆ ಟ್ವೀಟ್ ಮಾಡದೇ ಬಿಹಾರದವರಿಗೆ ಟ್ವೀಟ್ ಮಾಡ್ತಾರೆ ಎಂದರೆ ಹೇಗೆ? ಜನಕ್ಕೆ ನಾವ್ ಏನ್ ಉತ್ತರ ಕೊಡೋಣ. ಸಾಮಾಜಿಕ ಜಾಲತಾಣದಲ್ಲಿ ಜನ ಪ್ರಶ್ನೆ ಮಾಡ್ತಿದ್ದಾರೆ. ಕರ್ನಾಟಕದಲ್ಲಿ ಚುನಾವಣೆ ಇಲ್ಲ ಎಂದು ಮೋದಿ ಟ್ವೀಟ್ ಮಾಡಿಲ್ವಾ? ಪಕ್ಷ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕರ್ನಾಟಕವನ್ನು ಹೀಗೆ ನಿರ್ಲಕ್ಷ್ಯ ಮಾಡಿದರೆ ದಕ್ಷಿಣ ಭಾರತದಲ್ಲಿ ಬಿಜೆಪಿ ಅಸ್ಥಿತ್ವ ಕಳೆದುಕೊಳ್ಳುತ್ತೆ ಅಂತ ಎಚ್ಚರಿಕೆ ಕೊಟ್ಟರು.
Advertisement
ನೆರೆಗೆ ರಾಜ್ಯ ಸರ್ಕಾರವೇ ಹಣ ಹೊಂದಿಸಬಹುದು ಅಂದಿದ್ದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅ ಸಂಸದರಿಗೆ ಕಷ್ಟವೇ ಗೊತ್ತಿಲ್ಲ. ಅವರು ಪಕ್ಷ ಕಟ್ಟಿದವರು ಅಲ್ಲ. ನಮ್ಮಂತವರು ಪಕ್ಷ ಕಟ್ಟಿದವರು. ನಾವು ಹಳ್ಳಿಯಲ್ಲಿ ಓಡಾಡಿ ಪಕ್ಷ ಕಟ್ಟಿದ್ದೇವೆ. ಯಡಿಯೂರಪ್ಪ, ಅನಂತ್ ಕುಮಾರ್ ಅಂತಹವರು ಓಡಾಡಿ ಪಕ್ಷ ಕಟ್ಟಿದರು. ಈಗ ಯಾರ್ಯಾರೋ ಬಂದು ಏನೇನೋ ಹೇಳಿಕೆ ಕೊಟ್ಟು ಮಜಾ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹಳ್ಳಿ ಜನರ ಕಷ್ಟ ಅವರಿಗೆ ಗೊತ್ತಾ? ಸ್ವಲ್ಪ ಇಂಗ್ಲಿಷ್ ಬಂತು ಅಂತ ಅಂತಾರಾಷ್ಟ್ರೀಯ ನಾಯಕರು ಆದರೆ ಸಾಕಾ? ಜನರ ಕಷ್ಟ ಗೊತ್ತಿರಬೇಕು ಅಲ್ವಾ? ಹಳ್ಳಿ ಒಳಗೆ ಕೆಲಸ ಮಾಡೋರು ನಾವು. ಹಿಂದೆ ನಮ್ಮ ರಾಜ್ಯದ ವಿಚಾರಕ್ಕೆ ಧಕ್ಕೆ ಬಂದಾಗ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ. ಅಂದೇ ಇದನ್ನು ಪಕ್ಷದ ವಿರೋಧಿ ಚಟುವಟಿಕೆ ಎಂದರು. ನಾನು ನನ್ನ ಕ್ಷೇತ್ರದ ಜನರ ಪರ ಅಂತ ಅವತ್ತೇ ನಮ್ಮ ನಾಯಕರಿಗೆ ಹೇಳಿದ್ದೆ. ಇಂತಹ ಸ್ವಭಾವ ಸಂಸದರು ಬಳಸಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಕೊಟ್ಟಿರೋದು ಕರ್ನಾಟಕ. ಆಂಧ್ರ, ಕೇರಳ, ಪಾಂಡಿಚೇರಿಯಲ್ಲಿ ಎಷ್ಟು ಸ್ಥಾನ ಬಂದಿದೆ. ಕರ್ನಾಟಕದ ಜನ ಇಷ್ಟು ಸ್ಥಾನ ಕೊಟ್ಟಿದ್ದಕ್ಕೆ ಇದು ಬಳುವಳಿನಾ? ನಿಮ್ಮ ಅವರ ಜಗಳ ಏನಿದೆಯೋ ಗೊತ್ತಿಲ್ಲ. ಇದಕ್ಕೆ ಕರ್ನಾಟಕದ ಜನರನ್ನ ಯಾಕೆ ಬಲಿ ಕೊಡ್ತೀರಾ. ಕರ್ನಾಟಕದ ಜನರ ಮೇಲೆ ನೀವು ದ್ವೇಷ ಸಾಧಿಸುತ್ತಿದ್ದೀರಾ. ಯಾವುದೋ ಮುಖ್ಯಮಂತ್ರಿ ವಿರುದ್ಧ ದ್ವೇಷ ಅಲ್ಲ ಇದು. ರಾಜ್ಯದ ಜನರ ವಿರುದ್ಧ ದ್ವೇಷ ಸಾಧಿಸುತ್ತಿದ್ದೀರಾ. ಇದು ಕರ್ನಾಟಕದ ಜನರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಅಂತ ಸಂಸದರು ಹಾಗೂ ಮೋದಿ ವಿರುದ್ಧ ಆಕ್ರೋಶ ಹೊರ ಹಾಕಿದರು.
ಬಿಜೆಪಿಯಲ್ಲಿ ಎರಡು ಶಕ್ತಿ ಕೇಂದ್ರ ಇವೆ. ಇದೇ ಯಡಿಯೂರಪ್ಪ ವಿರುದ್ಧ ಟಾರ್ಗೆಟ್ ಮಾಡುತ್ತಿದೆ. ಪಕ್ಷದಲ್ಲಿ ಏನ್ ಆಗುತ್ತಿದೆ ನಮಗೆ ಗೊತ್ತಾಗುತ್ತಿಲ್ಲ. ಇನ್ನು ಸ್ವಲ್ಪ ದಿನ ಕಾದು ನೋಡ್ತೀವಿ. ಸರಿ ಹೋಗಿಲ್ಲ ಎಂದರೆ ಏನ್ ಮಾಡೋದು ಅಂತ ತೀರ್ಮಾನ ಮಾಡುತ್ತೇವೆ. ಬಿಜೆಪಿಯಲ್ಲಿ ಈಗ ಎರಡು ಶಕ್ತಿ ಕೇಂದ್ರಗಳಾಗಿವೆ. ಒಂದು ದೆಹಲಿಯಲ್ಲಿ ಕುಳಿತಿದೆ, ಇನ್ನೊಂದು ಬೆಂಗಳೂರಿನಲ್ಲಿ ಕುಳಿತಿದೆ. ಇವರಿಬ್ಬರ ಜಗಳದಲ್ಲಿ ನಾವು ಸಾಯ್ತಿದ್ದೇವೆ ಅಸಮಾಧಾನ ಹೊರ ಹಾಕಿದರು.
ಸಿಎಂ ಯಡಿಯೂರಪ್ಪ ಸೈಡ್ ಲೈನ್ ಮಾಡೋಕೆ ಅನುದಾನ ನೀಡುತ್ತಿಲ್ಲ ಎನ್ನುವ ಭಾವನೆ ಜನರಲ್ಲಿ ಮೂಡುತ್ತಿದೆ. ಇಡೀ ಕರ್ನಾಟಕ ಹೇಳುತ್ತಿದೆ. ಇದು ಟಾರ್ಗೆಟ್ ಬೇಸ್ ರಾಜಕೀಯ. ಒಬ್ಬ ವ್ಯಕ್ತಿಯನ್ನ ಮುಗಿಸುವ ಸಲುವಾಗಿ ಕರ್ನಾಟಕ ಮುಗಿಸಲು ಸಾಧ್ಯವಿಲ್ಲ. ಕರ್ನಾಟಕದ ಭವಿಷ್ಯ ಒಬ್ಬ ವ್ಯಕ್ತಿ ಕೈಯಲ್ಲಿ ಇಲ್ಲ. ಅವರನ್ನು ಮುಗಿಸೋಕೆ ಅನುದಾನ ಕೊಡೊಲ್ಲ, ಭೇಟಿ ಆಗುವುದಿಲ್ಲ ಎನ್ನುವುದು ಸರಿಯಲ್ಲ. ಜನರು ಹುಚ್ಚರಲ್ಲ. ನಮ್ಮ ಜೀವನದ ಕುಂಡಲಿಯನ್ನ ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಾರೆ ಎಂದು ಕಿಡಿಕಾರಿದರು.
ಯಡಿಯೂರಪ್ಪ ತಂತಿ ಮೇಲೆ ನಡಿಗೆ ಅನ್ನೋ ಹೇಳಿಕೆ ವಿಚಾರ ಮಾತನಾಡಿದ ಅವರು ಅಲ್ಪಮತ ಸರ್ಕಾರ ಬಂದ ಮೇಲೆ ಎಲ್ಲರೂ ತಂತಿ ಮೇಲೆಯೇ ನಡೆಯೋದು. ಗೋಡೆ ಮೇಲೆ ಯಾರು ನಡೆಯೋಕೆ ಆಗುವುದಿಲ್ಲ. ಅದಕ್ಕೆ ಬಹುಮತ ಬೇಕು ಅಂತ ಹೇಳೋದು. ಯಡಿಯೂರಪ್ಪರನ್ನ ಟಾರ್ಗೆಟ್ ಮಾಡ್ತಿದ್ದಾರೆ ಅನ್ನೋ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಇವತ್ತಿನ ವಿದ್ಯಾಮಾನ ನೋಡುತ್ತಿದ್ದರೆ ಇದು ಸತ್ಯ ಅನ್ನಿಸುತ್ತಿದೆ. ಇದು ಯಾವ ದಿಕ್ಕು ಪಡೆಯುತ್ತೋ ಗೊತ್ತಿಲ್ಲ. ಇವತ್ತಿನ ಬೆಳವಣಿಗೆಗಳು ಸಮಾಧಾನವಾಗಿ ಇಲ್ಲ ಅಂತ ತಿಳಿಸಿದರು.
ಅನರ್ಹ ಶಾಸಕರ ವಿರುದ್ಧ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ, ಮತ್ತು ಸಿಟಿ ರವಿ ಸೇರಿದಂತೆ ಕೆಲ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಸಚಿವರು ಹೀಗೆ ಮಾತುಗಳನ್ನ ಆಡೋದಿದರೆ ಯಾಕೆ ಸಚಿವರಾಗಬೇಕಿತ್ತು 17 ಶಾಸಕರು ರಾಜೀನಾಮೆ ಕೊಟ್ಟಿದ್ದಕ್ಕೆ ಇಂದು ಸರ್ಕಾರ ರಚನೆ ಆಗಿದೆ. ಅವರ ರಾಜೀನಾಮೆ ಕೊಡದೇ ಇದ್ದಿದ್ದರೆ ಬಿಜೆಪಿ ಸರ್ಕಾರ ಬರುತ್ತಿತ್ತಾ? ನಾವು ವಿರೋಧ ಪಕ್ಷದಲ್ಲಿ ಕೂರಬೇಕಿತ್ತು ಅಷ್ಟೇ ಅಂತ ಸಚಿವರಿಗೆ ತಿರುಗೇಟು ಕೊಟ್ಟರು.
ಆ 17 ಶಾಸಕರಿಂದಲೇ ಮಂತ್ರಿಯಾಗಿ ಗೂಟದ ಕಾರಲ್ಲಿ ಓಡಾಡುತ್ತಿದ್ದಾರೆ. ಆದರೆ ಇದನ್ನು ಮರೆತು ಬೇಜವಾಬ್ದಾರಿಯಿಂದ ಕೆಲ ಸಚಿವರು ಮಾತನಾಡುತ್ತಿದ್ದಾರೆ. ಯಾವುದೋ ದೊಡ್ಡ ಶಕ್ತಿ ಅ ಸಚಿವರ ಹಿಂದೆ ಇದೆ. ಹೀಗಾಗಿ ಅವರ ಹೀಗೆಲ್ಲ ಮಾತನಾಡುತ್ತಿದ್ದಾರೆ ಅಂತ ಪರೋಕ್ಷವಾಗಿ ಸಂತೋಷ್ ವಿರುದ್ಧ ಕಿಡಿಕಾರಿದರು.
ಇಂತಹ ಶಕ್ತಿ ಕೇಂದ್ರಗಳನ್ನು ಜನರೇ ಒಡೆಯುತ್ತಾರೆ. ಜನರು ಎಂತೆಂತವರನ್ನೆ ಒಡೆದಿದ್ದಾರೆ. ಇವೆರೆಲ್ಲ ಜನರಿಗೆ ಯಾವ ಲೆಕ್ಕ. ಇವರೆಲ್ಲ ಯಾವ ಗಿಡದ ತಪ್ಪಲು. ಇವರೆಲ್ಲ ಹೋರಾಟ ಮಾಡಿ ಬಂದವರಾ? ಉಪವಾಸ, ಲಾಠಿ ಏಟು ತಿಂದು ನಾವು ಪಕ್ಷ ಕಟ್ಟಿದವರು. ನಮ್ಮನ್ನು ಉರುಳಿಸಲು ಹೋದರೆ ಜನ ಇವರನ್ನೇ ಉರುಳಿಸುತ್ತಾರೆ. ಎಸಿ ಕೊಠಡಿಯಲ್ಲಿ ಕುಳಿತು ಪಕ್ಷ ಕಟ್ಟಿದರೆ ಉಳಿಯುತ್ತಾ? ಯಾವ ಪಕ್ಷವೂ ಉಳಿಯುವುದಿಲ್ಲ. ಏನೋ ಅವಕಾಶ ಸಿಕ್ಕಿದೆ ಅಂತ ಹೊರಟಿದ್ದಾರೆ ಅಷ್ಟೇ ಎಂದು ಪರೋಕ್ಷವಾಗಿ ಸಂತೋಷ್, ಕಟೀಲ್ ವಿರುದ್ಧ ಆಕ್ರೋಶ ಹೊರ ಹಾಕಿದರು.