ಬೆಂಗಳೂರು: ಅಂಗಾಳ ಪರಮೇಶ್ವರಿ ದೇವಿಯ ವಿಗ್ರಹವೊಂದು ಹಾಲು ಕುಡಿದಿದೆ ಎನ್ನುವ ಸುದ್ದಿ ತಿಳಿದ ಜನ ತಂಡೋಪತಂಡವಾಗಿ ಎಚ್‍ಎಎಲ್ ಬಳಿ ಇರುವ ಸುಧಾಮನಗರದ ದೇವಾಲಯಕ್ಕೆ ಆಗಮಿಸುತ್ತಿದ್ದಾರೆ.
ಇಂದು ಮಹಾಲಯ ಅಮಾವಾಸ್ಯೆ ಇರುವ ಕಾರಣ ನಿನ್ನೆ ಸ್ವಲ್ಪ ವಿಭಿನ್ನವಾಗಿಯೇ ತಾಯಿಗೆ ಅಲಂಕಾರ ಮಾಡಿ ಪೂಜಾ ಕೈಂಕರ್ಯ ಮಾಡೋಕೆ ಅರ್ಚಕಿ ಧನಲಕ್ಷ್ಮಿ ಮುಂದಾಗಿದ್ದಾರೆ. ಈ ವೇಳೆ ಧನಲಕ್ಷ್ಮಿಗೆ, ತಾಯಿ ಅಂಗಾಳ ಪರಮೇಶ್ವರಿ ಹಾಲು ಕೊಡಮ್ಮ ಎಂದು ಕರೆದಂತೆ ಭಾಸವಾಗಿದೆ. ತಕ್ಷಣ ಅವರು ಪಾತ್ರೆಯಲ್ಲಿ ಹಾಲಿಡಿದು ತಾಯಿಗೆ ಕುಡಿಸೋಕೆ ಮುಂದಾಗುತ್ತಿದ್ದಂತೆಯೇ ಅಂಗಾಳಪರಮೇಶ್ವರಿ ಮೂರ್ತಿ ಹಾಲುಕುಡಿಯೋಕೆ ಶುರುಮಾಡಿದ್ದಾಳಂತೆ.
ಈ ಪವಾಡವನ್ನು ಧನಲಕ್ಷ್ಮಿ ಅವರು ತಿಳಿಸಿದ್ದೆ ತಡ ಜನ ತಂಡೋಪತಂಡವಾಗಿ ದೇವಾಲಯಕ್ಕೆ ಬರ ತೊಡಗಿದ್ದಾರೆ. ಈ ಸುದ್ದಿ ಹರಿದಾಡೋಕೆ ಶುರುವಾಗುತ್ತಿದ್ದಂತೆಯೇ ಸಂಜೆ 6 ಗಂಟೆಯಿಂದ ಭಕ್ತರ ದಂಡೇ ಇಲ್ಲಿ ಹರಿದು ಬರುವುದಕ್ಕೆ ಶುರುವಾಯ್ತು. ಸುಧಾಮನಗರದ ಹಲವು ಪ್ರದೇಶಗಳಿಂದ ಬಂದ ಜನರು ದೇವಿಗೆ ಹಾಲು ಕುಡಿಸಿದ್ದಾರೆ. ಅಲ್ಲದೆ ಕಲ್ಲಿನಮೂರ್ತಿ ಹಾಲು ಕುಡಿಯುತ್ತಿರುವ ದೃಶ್ಯವನ್ನು ಭಕ್ತರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಆದರೆ ರಾತ್ರಿ 10 ಗಂಟೆಯ ನಂತರ ಹಾಲು ಕುಡಿಯೋದು ನಿಲ್ಲಿಸಿರುವುದಾಗಿ ಅರ್ಚಕಿ ತಿಳಿಸಿದ್ದಾರೆ.
ಹಾಲು ಕುಡಿದಿದ್ದಾಳೋ ಇಲ್ಲವೋ ಎನ್ನುವುದು ಭಕ್ತರ ನಂಬಿಕೆಗೆ ಬಿಟ್ಟ ವಿಚಾರವಾಗಿದೆ. ಆದರೆ ಹಾಲು ಕುಡಿಯುತ್ತಿರುವ ವಿಡಿಯೋ ವಾಟ್ಸಪ್ ಮೂಲಕ ಶೇರ್ ಆಗುತ್ತಿರುವ ಕಾರಣ ಈಗಲೂ ಜನ ದೇವಾಲಯಕ್ಕೆ ಬರುತ್ತಿದ್ದಾರೆ.