– ಸಿಎಂ ಪರಿಹಾರ ನಿಧಿಗೆ 1 ವರ್ಷದ ಸಂಬಳ ದೇಣಿಗೆ
– ಧಾರ್ಮಿಕ ಸಭೆಗೆ ಹೋಗಿದ್ದವರು ಸ್ವಯಂಪ್ರೇರಿತರಾಗಿ ಬನ್ನಿ
ಬೆಂಗಳೂರು: ಏನೇ ಒತ್ತಡ ಬಂದರೂ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಗೃಹ ಸಚಿವ ಬಸರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈಗಲೇ ಪರಿಸ್ಥಿತಿ ಸಾಕಷ್ಟು ಬಿಗಡಾಯಿಸಿದೆ. ಹೀಗಾಗಿ ಈಗ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ರೆ ಅವರ ಮೇಲೆ ಅವರಿಗೇ ನಿಯಂತ್ರಣ ಇರಲ್ಲ. ಹೀಗಾಗಿ ಒಂದು ವಾರದಲ್ಲಿ ಸುಮ್ಮನೆ ಇದ್ದರೆ ಏನೂ ಆಗಲ್ಲ. ಮದ್ಯ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಹೆಚ್ಚುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಸಿಎಂ ಪರಿಹಾರ ನಿಧಿಗೆ ತಮ್ಮ ಒಂದು ವರ್ಷದ ಸಂಬಳ ದೇಣಿಗೆ ಘೋಷಣೆ ಮಾಡಿದರು. ಅದೇ ರೀತಿ ತಮ್ಮ ಇತರ ಸಹೋದ್ಯೋಗಿಗಳು ಕೂಡ ನೀಡಬೇಕೆಂದು ಮನವಿ ಮಾಡಿದರು.
ಕರ್ನಾಟಕದಿಂದ ದೆಹಲಿಯ ನಿಜಾಮುದ್ದೀನ್ ಜಮಾತ್ ಧಾರ್ಮಿಕ ಸಭೆಗೆ ಹೋಗಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಕರ್ನಾಟಕದವರೇ ಆಗಿರುವ 342 ಮಂದಿ ದೆಹಲಿಗೆ ಹೋಗಿದ್ದಾರೆ ಅನ್ನೋದು ಪತ್ತೆಯಾಗಿದೆ. ಈಗಾಗಲೇ 200 ಮಂದಿ ಆಸ್ಪತ್ರೆ ಕ್ವಾರಂಟೈನ್ ಮಾಡಲಾಗಿದೆ. ಉಳಿದ 142 ಮಂದಿಯನ್ನ ಹೋಮ್ ಕ್ವಾರಂಟೈನ್ ಮಾಡಲಾಗ್ತಿದ್ದು, ಎಲ್ಲರೂ ಪತ್ತೆಯಾಗಿದ್ದಾರೆ. ಇಂದು ರಾತ್ರಿಯೊಳಗೆ ಎಲ್ಲರನ್ನೂ ಪತ್ತೆಹಚ್ಚಲು ಸೂಚಿಸಲಾಗಿದೆ ಎಂದರು.
ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಬಂದಿದ್ದ 62 ಮಂದಿ ವಿದೇಶಿಗರು 12 ಮಂದಿ ವಾಪಸ್ ಹೋಗಿದ್ದಾರೆ. ಉಳಿದ 50 ಮಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ. ದೆಹಲಿ ಧಾರ್ಮಿಕ ಸಭೆಗೆ ಹೋಗಿದ್ದವರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಕೇರಳದಿಂದ ರಾಜ್ಯ ಸಂಪರ್ಕಿಸುವ 23 ರಸ್ತೆಗಳನ್ನು ಬಂದ್ ಮಾಡಲಾಗಿದೆ. ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಕಾನೂನಿನ ಅಡಿಯಲ್ಲೇ ಗಡಿ ಬಂದ್ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಕೇರಳ ಗಡಿಭಾಗವನ್ನ ಓಪನ್ ಮಾಡಲ್ಲ ಎಂದು ನುಡಿದರು.
ದೆಹಲಿಯ ಧಾರ್ಮಿಕ ಸಭೆಯಲ್ಲಿ ಬಾಗಲಕೋಟೆಯಲ್ಲಿ ಸದ್ಯ ಹೆಚ್ಚು ಪ್ರಕರಣ ದಾಖಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದ್ದಾರೆ. ದಯಮಾಡಿ ನಾನು ಮನವಿ ಮಾಡುತ್ತೇನೆ. ಯಾರು ದೆಹಲಿ ಧಾರ್ಮಿಕ ಸಭೆಗೆ ಹೋಗಿದ್ದಾರೋ ಅವರೇ ಸ್ವಯಂಪ್ರೇರಿತರಾಗಿ ಮುಂದೆ ಬನ್ನಿ. ಸರ್ಕಾರದ ಆದೇಶ ಪಾಲಿಸಿ, ಕ್ವಾರಂಟೈನ್ ಆಗಿ, ಯಾವುದೇ ತೊಂದರೆ ಮಾಡಲ್ಲ ಎಂದು ಹೇಳಿದರು.