ಬೆಂಗಳೂರು: ಕೋರಮಂಗಲದಲ್ಲಿರುವ ಕಾಲ್‌ಸೆಂಟರ್‌ನಿಂದ ಉದ್ಯೋಗಿಗಳನ್ನು ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ ಪೊಲೀಸರು. ಕಿಡ್ನ್ಯಾಪ್ ನಡೆದ 12 ಗಂಟೆಯೊಳಗೆ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಛಲಪತಿ, ಭರತ್, ಪವನ್, ಪ್ರಸನ್ನ, ಅತೀಕ್, ಜಬೀವುಲ್ಲಾ ಸೇರಿ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೊಳಗಾಗಿರುವ ಛಲಪತಿ ಕೋಲಾರ ಜಿಲ್ಲೆಯ ಕಾನ್‌ಸ್ಟೇಬಲ್.
ಪ್ರಕರಣ ಏನು?
ಕೋರಮಂಗಲದಲ್ಲಿರುವ ಕಾನ್‌ಸೆಂಟರ್‌ವೊಂದರಿಂದ ನಾಲ್ವರು ಉದ್ಯೋಗಿಗಳನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ನಿನ್ನೆ ಮಧ್ಯರಾತ್ರಿ ಕಾಲ್‌ಸೆಂಟರ್ ಬಳಿ ಹೋಗಿದ್ದ ಆರೋಪಿಗಳು, ನಾಲ್ವರನ್ನು ಕರೆದು ನಾವು ಪೊಲೀಸರು ಎಂದು ಬೆದರಿಸಿದ್ದಾರೆ. ಬಳಿಕ ಪವನ್, ರಾಜ್ ವೀರ್, ಆಕಾಶ್, ಅನಸ್ ಎಂಬವರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಅಪಹರಿಸಿದ್ದಾರೆ. ಮುಂಜಾನೆ 4 ಗಂಟೆಗೆ ಪೊಲೀಸರಿಗೆ ಬಿಪಿಒ ಸಿಬ್ಬಂದಿ ವಿಚಾರ ತಿಳಿಸಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ನಾಲ್ಕು ಟೀಂ ಮಾಡಿಕೊಂಡು ಆರೋಪಿಗಳ ಹುಡುಕಾಟ ಶುರು ಮಾಡಿದ್ದರು. ಅತ್ತ ಕಿಡ್ನ್ಯಾಪ್ ಮಾಡಿ 25 ಲಕ್ಷ ಹಣಕ್ಕೆ ಆರೋಪಿಗಳು ಬೇಡಿಕೆಯಿಟ್ಟಿದ್ದರು. ಹಾಗೆಯೇ ಆಪರೇಷನ್ ಮ್ಯಾನೇಜರ್ ಅಕೌಂಟ್‌ನಿಂದ 18 ಲಕ್ಷ ರೂ. ವರ್ಗಾವಣೆ ಮಾಡಿಕೊಂಡಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಆರೋಪಿಗಳಿದ್ದ ಜಾಗ ಪೊಲೀಸರು ಪತ್ತೆಹಚ್ಚಿದರು. ಹೊಸಕೋಟೆಯ ಲಾಡ್ಜ್‌ನಲ್ಲಿ ನಾಲ್ವರನ್ನು ಆರೋಪಿಗಳು ಕೂಡಿ ಹಾಕಿದ್ದರು. ಉದ್ಯೋಗಿಗಳನ್ನು ರಕ್ಷಿಸಿ, 8 ಆರೋಪಿಗಳನ್ನು ಬಂಧಿಸಿ, ಎರಡು ಕಾರುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಇತ್ತೀಚೆಗೆ ನಡೆದಿದ್ದ ಕಾಲ್‌ಸೆಂಟರ್ ರೇಡ್ ಕೇಸ್ ಬಂಡವಾಳ ಮಾಡಿಕೊಂಡು ಆರೋಪಿಗಳು ಈ ಕೃತ್ಯ ಎಸಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಕಂಪನಿಯ ಮ್ಯಾನೇಜರ್ ಲೆವೆಲ್‌ನ ನಾಲ್ಕು ಸಿಬ್ಬಂದಿಯನ್ನು 8 ಜನ ಬಂದು ಮಾತನಾಡಿಸಿದ್ದರು. ಪೊಲೀಸ್ ಅಂತ ಹೇಳಿ ಡಿಟೇಲ್ ಕೊಡಿ ಎಂದು ಕರೆದಿದ್ದಾರೆ. ನಂತರ ಕೆಳಗೆ ಕರೆದುಕೊಂಡು ಬಂದು ಕಿಡ್ನ್ಯಾಪ್ ಮಾಡಿದ್ದಾರೆ. ನಂತರ ಆರೋಪಿಗಳು ದುಡ್ಡಿಗೆ ಬೇಡಿಕೆ ಇಟ್ಟಿದ್ದಾರೆ. ಇದರಲ್ಲಿ ಮ್ಯಾನೇಜರ್ ಅಕೌಂಟ್‌ನಿಂದ ಆರೋಪಿಗಳ ಸಂಬಂಧಿಕರ ಖಾತೆಗೆ ಹಣ ವರ್ಗಾವಣೆ ಆಗಿದೆ. ಸುಮಾರು 18.90 ಲಕ್ಷ ಹಣವನ್ನ ಆನ್‌ಲೈನ್ ಬ್ಯಾಂಕಿಂಗ್ ಮೂಲಕ ವರ್ಗಾವಣೆ ಮಾಡಿದ್ದಾರೆ. ನಂತರ ಹಾರ್ಡ್‌ಕ್ಯಾಶ್‌ಗೆ ಡಿಮ್ಯಾಂಡ್ ಮಾಡಿದ್ದಾಗ ಪೊಲೀಸರಿಗೆ ಮಾಹಿತಿ ಬಂದಿದೆ. ಬಳಿಕ ನಾಲ್ಕು ತಂಡ ಮಾಡಿ 8 ಜನ ಆರೋಪಿಗಳನ್ನ ಬಂಧಿಸಿದ್ದೇವೆ. ಇವರನ್ನ ಕರೆದೊಯ್ಯಲು ಬಳಕೆಯಾಗಿದ್ದ 2 ವಾಹನ ಸೀಜ್ ಮಾಡಿದ್ದೇವೆ. ಆರೋಪಿಗಳಲ್ಲಿ ಬಹುತೇಕರು ಕೋಲಾರ ಮೂಲದವರು. ಹೆಚ್ಚಿನ ತನಿಖೆ ಮುಂದುವರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
