ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) 3 ವರ್ಷದ ಹಿಂದೆ ಮಹಿಳೆಯೊಬ್ಬರು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ರಾಜ್ಯ ಅಪರಾಧ ತನಿಖಾ ಇಲಾಖೆ (CID) ಸೆಪ್ಟಿಕ್ ಟ್ಯಾಂಕ್‍ನಿಂದ ಆಕೆಯ ಅಸ್ಥಿಪಂಜರವನ್ನು ವಶಪಡಿಸಿಕೊಂಡಿದೆ. ಅಲ್ಲದೇ ಇದರಿಂದ ಕೊಲೆ ಮಾಡಿ ನಾಪತ್ತೆ ಕಥೆ ಕಟ್ಟಿದ್ದ ಪತಿಯ ಮುಖವಾಡ ಕಳಚಿದೆ.
ಮಹಿಳೆ ತುಂಪಾ ಮಂಡಲ್ ಎಂಬಾಕೆ ಮಾರ್ಚ್ 2020 ರಲ್ಲಿ ನಾಪತ್ತೆಯಾಗಿದ್ದಳು. ನಂತರ ಆಕೆಯ ತಂದೆ ಲಕ್ಷ್ಮಣ್ ಹಾಲ್ದರ್ ಸ್ಥಳೀಯ ಪೊಲೀಸರಿಗೆ ನಾಪತ್ತೆ ದೂರು ಸಲ್ಲಿಸಿದರು. ಈ ಪ್ರಕರಣದಲ್ಲಿ ಮೃತ ಮಹಿಳೆಯ ಪತಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಅಲ್ಲದೇ ಕೊಲೆ ಆರೋಪ ಸಹ ಮಾಡಲಾಗಿತ್ತು. ಆದರೆ ಪೊಲೀಸರಿಗೆ ಯಾವುದೇ ಸಾಕ್ಷ್ಯಗಳು ಸಿಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಆತನಿಗೆ ಜಾಮೀನು ಮಂಜೂರು ಮಾಡಿತ್ತು. ಇದನ್ನೂ ಓದಿ: ಲೇಡಿಸ್ ಪಿಜಿಗಳೇ ಟಾರ್ಗೆಟ್ – ಸ್ನಾನ ಮಾಡುವುದನ್ನು ಕದ್ದುಮುಚ್ಚಿ ವೀಡಿಯೋ ಮಾಡುತ್ತಿದ್ದಾಗಲೇ ಕಿರಾತಕ ಲಾಕ್
ಬಳಿಕ ಮಹಿಳೆಯ ತಂದೆ ಪ್ರಕರಣದ ಉನ್ನತ ತನಿಖೆಗಾಗಿ ಕೋಲ್ಕತ್ತಾ ಹೈಕೋರ್ಟ್‍ನ್ನು (Kolkata High Court) ಸಂಪರ್ಕಿಸಿದ್ದರು. ಅವರ ಮನವಿಗೆ ಸ್ಪಂದಿಸಿದ್ದ ಹೈಕೋರ್ಟ್ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿತ್ತು. ಬಳಿಕ ಈ ಜೂ.13 ರಂದು, ಹೈಕೋರ್ಟ್ ಆದೇಶದ ಮೇರೆಗೆ ಸಿಐಡಿ ಘಟನೆಯ ತನಿಖೆಯನ್ನು ವಹಿಸಿಕೊಂಡಿತ್ತು.
ಪ್ರಕರಣದ ತನಿಖೆಯನ್ನು ಕೈಗೊಂಡಿದ್ದ ಸಿಐಡಿ ಮಹಿಳೆಯ ಪತಿಯನ್ನು ಮತ್ತೆ ವಿಚಾರಣೆ ನಡೆಸಿದೆ. ತನಿಖೆ ಆರಂಭಿಸಿದ 10 ದಿನಗಳಲ್ಲಿ ಪತಿ ತನ್ನ ಹೆಂಡತಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆಕೆಯ ಶವವನ್ನು ಸೆಪ್ಟಿಕ್ ಟ್ಯಾಂಕ್‍ನಲ್ಲಿ ಹಾಕಿದ್ದಾಗಿ ತಿಳಿಸಿದ್ದಾನೆ. ಆರೋಪಿ ಬೊಂಬಾಲ್ ಮಂಡಲ್ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.
ಪತ್ನಿಗೆ ಅಕ್ರಮ ಸಂಬಂಧ ಇರಬಹುದು ಎಂದು ಶಂಕಿಸಿ, ಆರೋಪಿ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾನೆ. ಬಳಿಕ ಸೆಫ್ಟಿಕ್ ಟ್ಯಾಂಕ್‍ನಲ್ಲಿ ಶವ ಮುಚ್ಚಿಟ್ಟಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಟೇಕ್‍ಆಫ್ ವೇಳೆ ವಿಮಾನದ ಟಯರ್ ಬ್ಲಾಸ್ಟ್ – ಸಿಬ್ಬಂದಿ ಸೇರಿ 11 ಜನರಿಗೆ ಗಾಯ