ಮುಂಗಾರು ಮಳೆ ಜೋರಾಗಿದೆ..! ಈ ಚಳಿ ಮಳೆಗೆ ಬಾಯಿಗೆ ಬಿಸಿ ಬಿಸಿ ರುಚಿ ಬೇಕಾ? ಹಾಗಾದ್ರೇ ಈ ಬೆಂಡೆಕಾಯಿ ಬಜ್ಜಿ (Bendekayi Bajji) ಮಾಡಿ ತಿನ್ನಿ. ಇದು ಸಾಮಾನ್ಯ ಎಲ್ರಿಗೂ ಇಷ್ಟ ಆಗುತ್ತೆ.. ಹಾಗಾದ್ರೆ ಬೆಂಡೆಕಾಯಿ ಬಜ್ಜಿ ಮಾಡೋದು ಹೇಗೆ ಅಂತ ತಿಳ್ಕಳ್ಳೋಣ ಬನ್ನಿ.
ಬೇಕಾಗುವ ಪದಾರ್ಥಗಳು
* ಬೆಂಡೆಕಾಯಿ 10-15
* ಕಡಲೆಬೇಳೆ ಹಿಟ್ಟು ಅರ್ಧ ಕಪ್
* ಕಾರ್ನ್‌ಫ್ಲೋರ್ 2 ಚಮಚ
* ಅಕ್ಕಿ ಹಿಟ್ಟು 1 ಚಮಚ
* ಓಂಕಾಳು ಅರ್ಧ ಟೇಬಲ್ ಸ್ಪೂನ್
* ಅಡುಗೆ ಸೋಡ ಚಿಟಿಕೆಯಷ್ಟು
* ಉಪ್ಪು ರುಚಿಗೆ ತಕ್ಕಷ್ಟು
* ಎಣ್ಣೆ
* ಟೊಮೆಟೋ 2
* ಜೀರಿಗೆ ಪುಡಿ
*ಹಸಿಮೆಣಸಿನಕಾಯಿ 3
ತಯಾರಿಸುವ ವಿಧಾನ
ಮೊದಲಿಗೆ ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಒಂದು ಬಟ್ಟೆಯಲ್ಲಿ ಇಟ್ಟು ಒಣಗಿಸಿಕೊಳ್ಳಬೇಕು. ಬಳಿಕ ಒಂದು ಪಾತ್ರೆಯಲ್ಲಿ ಕಡಲೇಬೇಳೆ ಹಿಟ್ಟು ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಕಾರ್ನ್‌ಫ್ಲೋರ್, ಅಕ್ಕಿ ಹಿಟ್ಟು, ಅಡುಗೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು, ಓಂಕಾಳು ಹಾಕಿ ಚೆನ್ನಾಗಿ ಕಲಸಿ ಒಂದು ಪಾತ್ರೆಯನ್ನು ಮುಚ್ಚಿ 20 ನಿಮಿಷ ಬಿಡಿ. ನಂತರ ಬೆಂಡೆಕಾಯಿಯನ್ನು ಮಧ್ಯಭಾಗದಲ್ಲಿ ಸೀಳಿಕೊಳ್ಳಿ. ಅದರೊಳಗೆ ಜೀರಿಗೆ ಹಾಗೂ ಉಪ್ಪು ಮಿಶ್ರಣವನ್ನು ತುಂಬಿ. ಬಳಿಕ ಟೊಮೆಟೊವನ್ನು ಕಟ್ ಮಾಡಿಕೊಂಡು ಅದನ್ನು ಎಣ್ಣೆಯಲ್ಲಿ ಹಾಕಿ ಬಾಡಿಸಿ, ಅದಕ್ಕೆ ಕಟ್ ಮಾಡಿ ಹಸಿಮೆಣಸಿನಕಾಯಿಯನ್ನು ಹಾಕಿ ಹುರಿದುಕೊಳ್ಳಿ. ಬಳಿಕ ಎರಡನ್ನೂ ಮಿಕ್ಸಿ ಜಾರ್‌ಗೆ ಹಾಕಿ ಚೆನ್ನಾಗಿ ರುಬ್ಬಿ. ಈ ರುಬ್ಬಿದ ಮಿಶ್ರಣವನ್ನು ಎಲ್ಲಾ ಬೆಂಡೆಕಾಯಿಯ ಒಳಗೆ ಸ್ವಲ್ಪ ಸ್ವಲ್ಪ ತುಂಬಿ.
ಇದಾದ ಬಳಿಕ ಒಲೆಯ ಮೇಲೆ ಬಾಣಲೆಯನ್ನು ಇಟ್ಟು ಸ್ವಲ್ಪ ಎಣ್ಣೆ ಹಾಕಿ ಬೆಂಡೆಕಾಯಿಯನ್ನು ಹುರಿದುಕೊಳ್ಳಿ. ನಂತರ ಒಲೆಯ ಮೇಲೆ ಬಾಣಲೆಯನ್ನು ಇಟ್ಟು ಕರಿಯಲು ಬೇಕಾಗುವಷ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿ ಆದ ಮೇಲೆ ಹಿಟ್ಟಿನಲ್ಲಿ ಹುರಿದ ಬೆಂಡೆಕಾಯಿಗಳನ್ನು ಅದ್ದಿ ಕರಿಯಿರಿ. ಬೆಂಡೆಕಾಯಿ ಕಂದು ಬಣ್ಣ ಬರುವವರೆಗೂ ಕರಿದರೆ ಆಯ್ತು, ಬೆಂಡೆಕಾಯಿ ಬಜ್ಜಿ ಸವಿಯಲು ಸಿದ್ಧ!