ಬೆಂಗಳೂರು: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡಿದ ಇಬ್ಬರೂ ಉಗ್ರರರಲ್ಲ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ರಿಯಾಜ್ ಅಹಮದ್ ತಾವಾಗಿಯೇ ಬಂದು ಹೇಳಿಕೆ ನೀಡಿದ್ದಾರೆ. ಅನುಮಾನ ಮೂಡಿಸಿದ ಮತ್ತೊಬ್ಬ ವ್ಯಕ್ತಿ ಶಾಜಿದ್ ಖಾನ್ ಪತ್ತೆಯಾಗಿದ್ದಾರೆ. ಅವರು ರಾಜಸ್ಥಾನದ ಮೂಲದ ವ್ಯಕ್ತಿ ಎಂಬ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಮೆಟ್ರೋ ಸ್ಟೇಷನ್‍ಗೆ ಬಂದಿದ್ದ ವ್ಯಕ್ತಿ ಮೆಟಲ್ ಡಿಟೆಕ್ಟರ್ ಬಳಿ ಹಾದು ಹೋದಾಗ ಸದ್ದಾಗಿತ್ತು. ಆದರೆ ಆತ ಅಲ್ಲಿಂದ ಹೊರ ನಡೆದಿದ್ದ. ಈ ವರ್ತನೆ ಅನುಮಾನಕ್ಕೆ ಕಾರಣವಾಗಿತ್ತು. ಬಳಿಕ ಶಂಕಿತ ವ್ಯಕ್ತಿಯ ಪತ್ತೆಗಾಗಿ ನಾಲ್ಕು ವಿಶೇಷ ತಂಡ ರಚನೆ ಮಾಡಿದ್ದೇವು. ರಿಯಾಜ್ ಅಹಮದ್ ಉಪ್ಪಾರ ಪೊಲೀಸ್ ಠಾಣೆಗೆ ಬಂದು ಹೇಳಿಕೆ ನೀಡಿದ್ದರು. ಮತ್ತೊಬ್ಬ ವ್ಯಕ್ತಿಯ ಬಗ್ಗೆ ಶೋಧ ಮಾಡಲಾಗಿತ್ತು. ಆ ವ್ಯಕ್ತಿ ಕೂಡ ಈಗ ಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
Advertisement
ಶಾಜಿದ್ ಖಾನ್, ಮಸೀದಿಯ ಬಳಿ ದಾನ ಪಡೆಯುವ ವ್ಯಕ್ತಿ ಆಗಿದ್ದಾರೆ. ಮೆಟ್ರೋ ಸ್ಟೇಷನ್ ಬಳಿ ಹೋದಾಗ ಅವರ ಜೇಬಿನಲ್ಲಿ ಇದ್ದ ಕಾಯಿನ್‍ಗಳಿಂದ ಶಬ್ಧ ಆಗಿತ್ತು. ಹೀಗಾಗಿ ಅವರನ್ನು ತಡೆ ಹಿಡಿಯಲಾಗಿತ್ತು. ಭದ್ರತಾ ಸಿಬ್ಬಂದಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ಇಬ್ಬರಿಗೂ ಸರಿಯಾದ ಭಾಷೆ ಬಾರದೇ ಇದ್ದ ಕಾರಣ ಈ ಗೊಂದಲ ನಿರ್ಮಾಣವಾಗಿದೆ ಎಂದರು.
Advertisement
ಶಾಜಿದ್ ಖಾನ್ ಪತ್ನಿ ಮಕ್ಕಳನ್ನು ಕರೆದುಕೊಂಡು ಬಂದು ಮಸೀದಿ ಬಳಿ ದಾನ ಪಡೆಯುತ್ತಿದ್ದಾರೆ. ಅವರು ಮೊದಲ ಬಾರಿ (ಸೋಮವಾರ) ಮೆಟ್ರೋ ಹತ್ತಲು ಬಂದಿದ್ದರು. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಪ್ರಶ್ನೆ ಮಾಡಿದ್ದರಿಂದ ಗಾಬರಿಯಾಗಿ ಹೊರ ಹೋಗಿದ್ದರು ಎನ್ನುವುದು ತನಿಖೆಯ ಬಳಿಕ ತಿಳಿದು ಬಂದಿದೆ ಎಂದು ತಿಳಿಸಿದರು.
ಈ ಬುಧವಾರ ರಿಯಾಜ್ ಅಹ್ಮದ್ (70) ಅವರು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚೆನ್ನಣ್ಣನವರ್ ಅವರ ಕಚೇರಿಗೆ ಹಾಜರಾಗಿ ತನ್ನ ವಿವರವನ್ನು ನೀಡಿದ್ದರು. ನಾನು ಮೆಜೆಸ್ಟಿಕ್‍ನಲ್ಲಿ ವಾಚ್ ವ್ಯಾಪಾರಿ ಹಾಗೂ ರಿಪೇರಿ ಮಾಡುತ್ತಿದ್ದು, ನಾಯಂಡಹಳ್ಳಿಯಲ್ಲಿ ವಾಸವಾಗಿದ್ದೇನೆ. ನಿತ್ಯವೂ ಮೆಟ್ರೋದಲ್ಲಿ ಓಡಾಡುತ್ತೇನೆ ಎಂದು ತಿಳಿಸಿದ್ದರು.
ನಾನು ಯಾವುದೇ ಉಗ್ರ ಸಂಘಟನೆಗೆ ಸೇರಿಲ್ಲ. ಶಂಕಿತ ವ್ಯಕ್ತಿ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರಿಂದ ಜನರು, ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ನನಗೆ ರಕ್ಷಣೆ ಕೊಡಿ. ಗಡ್ಡದಾರಿಗಳೆಲ್ಲಾ ಉಗ್ರರಾ? ಗಡ್ಡ ಬಿಡುವುದೇ ತಪ್ಪೇ ಎಂದು ಅವರು ಅಳಲು ತೋಡಿಕೊಂಡಿದ್ದರು.
ಆಗಿದ್ದೇನು?:
ಮೆಟ್ರೋ ನಿಲ್ದಾಣದಲ್ಲಿ ಸೋಮವಾರ ರಾತ್ರಿ ಕಪ್ಪು ಬಣ್ಣದ ಸೂಟ್ ಧರಿಸಿದ್ದ ಬಂದಿದ್ದ ವ್ಯಕ್ತಿ (ಶಾಜಿದ್ ಖಾನ್) ಮೆಟಲ್ ಡಿಟೆಕ್ಟರ್ ಬಳಿಗೆ ಹೋಗಿದ್ದಾಗ ಸದ್ದಾಗಿತ್ತು. ಆದರೆ ಸೆಕ್ಯೂರಿಟಿ ಕೈಗೆ ಸಿಗದೇ ಹೊರ ನಡೆದಿದ್ದರು. ಶಾಜಿದ್ ಖಾನ್ ಹೊರ ಹೋದ ಕೆಲ ನಿಮಿಷದಲ್ಲಿ ರಿಯಾಜ್ ಅಹ್ಮದ್ ಮೆಟ್ರೋ ನಿಲ್ದಾಣವನ್ನು ಪ್ರವೇಶಿಸಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ಎಲ್ಲರಿಗಿಂತ ಜಾಸ್ತಿ ಸಮಯ ಪರಿಶೀಲನೆ ನಡೆಸಿದ್ದರು. ಇದಕ್ಕೆ ಸಿಟ್ಟಾಗಿ ಅವರು ತಿರುಗಿ ತಿರುಗಿ ಮುಂದೆ ಹೋಗಿದ್ದರು. ಕಾಕತಾಳೀಯ ಎಂಬಂತೆ ಇಬ್ಬರ ವರ್ತನೆ ಅನುಮಾನ ಮೂಡಿಸಿದ ಹಾಗೆ ಇದ್ದ ಹಿನ್ನೆಲೆಯಲ್ಲಿ ಇಬ್ಬರ ವಿಡಿಯೋ ಮಾಧ್ಯಮಗಳಲ್ಲಿ ರಿಲೀಸ್ ಆಗಿತ್ತು. ಪೊಲೀಸರು ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದರು.
ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟವಾದ ಹಿನ್ನೆಲೆಯಲ್ಲಿ ದೇಶದಲ್ಲಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಹಿಂದೆ ಬೆಂಗಳೂರಿಗೆ ಉಗ್ರರು ಬಂದಿಳಿದಿದ್ದಾರೆ. ಐಟಿ ಕಂಪನಿಗಳ ಮೇಲೆ ದಾಳಿ ನಡೆಸಲು ತಯಾರಿ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಭಾನುವಾರದಂದು ಬೆಂಗಳೂರು ಸಿಟಿ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದರು.