ಬೇಲೂರು ಜಾತ್ರೆಯಲ್ಲಿ ಕುರಾನ್ ಬದಲು ಶ್ಲೋಕ ಪಠಣ – ಹಿಂದೂ ಸಂಘಟನೆಗಳಿಂದ ಜೈ ಶ್ರೀರಾಮ್ ಘೋಷಣೆ

Public TV
3 Min Read
Belur Chennakeshava Swamy Temple hassana Quran Rathotsava

ಹಾಸನ: ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ದೇವಸ್ಥಾನದ (Belur Chennakeshava Swamy Temple) ವಾರ್ಷಿಕ ಜಾತ್ರೆ ಮಂಗಳವಾರ ನಡೆದಿದ್ದು, ಈ ಸಂದರ್ಭದಲ್ಲಿ ವಾರ್ಷಿಕವಾಗಿ ನಡೆಯುವ ಗೌರವ ವಂದನೆ ಸ್ವೀಕಾರ ಸಂಪ್ರದಾಯವನ್ನು ಪಾಲನೆ ಮಾಡಲಾಗಿದೆ. ಸಾಮಾನ್ಯವಾಗಿ ಈ ವೇಳೆ ಕುರಾನ್ (Quran) ಪಠಣ ನಡೆಸುತ್ತಿದ್ದರೂ ಈ ಬಾರಿ ಮುಸ್ಲಿಂ ಖಾಜಿಗಳು ಕೇವಲ ಶ್ಲೋಕ (Shloka) ಪಠಣಕ್ಕೆ ಸೀಮಿತಗೊಳಿಸಿದ್ದಾರೆ. ಈ ವೇಳೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜೋರಾಗಿ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದ್ದಾರೆ.

ಬೆಳಗ್ಗೆ ಸುಮಾರು 10:50ಕ್ಕೆ ವಾಡಿಕೆಯಂತೆ ಖಾಜ ಸಾಹೇಬರು ದೇವಸ್ಥಾನದ ಮೂಲೆಯ ಮೆಟ್ಟಿಲ ಮೇಲೆ ಶ್ಲೋಕ ಪಠಿಸಿದ ನಂತರ ತೇರು ಎಳೆಯಲಾಯಿತು. ಈ ವೇಳೆ ಸ್ಥಳೀಯ ಶಾಸಕ ಕೆಎಸ್ ಲಿಂಗೇಶ್, ಮಾಜಿ ಸಚಿವ ಹೆಚ್‌ಡಿ ರೇವಣ್ಣ, ದೇವಸ್ಥಾನದ ಆಡಳಿತಾಧಿಕಾರಿ ವಿದ್ಯುಲ್ಲತಾ, ಸೇರಿದಂತೆ ಸಹಸ್ರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.

Sri Chennakeshava Swamy Temple Belur hassana 2

ಕುರಾನ್ ಪಠಣ ವಿವಾದದಿಂದ ಚನ್ನಕೇಶವಸ್ವಾಮಿ ರಥೋತ್ಸವಕ್ಕೆ (Rathotsava) ಹಲವು ಅಡಚಣೆಗಳು ಎದುರಾಗಿದ್ದವು. ಇದರ ನಡುವೆಯೂ ಮಂಗಳವಾರದಿಂದ ಜಾತ್ರಾ ಮಹೋತ್ಸವ ಆರಂಭವಾಗಿದೆ. ರಥೋತ್ಸವದ ವೇಳೆ ಕುರಾನ್ ಪಠಣ ಮಾಡದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜೈ ಶ್ರೀರಾಮ್ ಘೋಷಣೆ ಕೂಗಿದರು.

ಸೋಮವಾರ ಸಂಜೆ ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಕುರಾನ್ ಪಠಣ ಮಾಡುವ ಸುತ್ತಲೂ ಬ್ಯಾರಿಕೇಡ್ ಹಾಕಿ ಅರೆ ಮಿಲಿಟರಿ ಕಾರ್ಯಪಡೆ ಹಾಗೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರತಿ ವರ್ಷ ರಥದ ಮುಂದೆ ಕುರಾನ್ ಪಠಣ ಮಾಡಲಾಗುತ್ತಿತ್ತು. ಆದರೆ ಈ ಭಾರಿ ವಿರೋಧ ವ್ಯಕ್ತವಾದ್ದರಿಂದ ದೇವಾಲಯದ ಹೊರಭಾಗದ ಮೂಲೆಯಲ್ಲಿ ಮೆಟ್ಟಿಲ ಮೇಲೆ ಬೇಲೂರು ತಾಲೂಕಿನ ದೊಡ್ಡ ಮೇದೂರು ಗ್ರಾಮದ ಸಯ್ಯದ್ ಸಜ್ಜಾದ್ ಭಾಷಾ ಖಾದ್ರಿ ಶ್ಲೋಕ ಓದಿದರು.

Sri Chennakeshava Swamy Temple Belur hassana

ಇದಕ್ಕೂ ಮುನ್ನ ಆಗಸದಲ್ಲಿ ಗರುಡ ರಥದ ಸುತ್ತ ಮೂರು ಬಾರಿ ಸುತ್ತಿತು. ಸಯ್ಯದ್ ಸಜ್ಜಾದ್ ಭಾಷಾ ಖಾದ್ರಿ ಶ್ಲೋಕ ಓದಿದ ಬಳಿಕ ಸಾವಿರಾರು ಭಕ್ತರು ತೇರು ಎಳೆದರು. ಈ ವೇಳೆ ಭಕ್ತರು ತೇರಿಗೆ ಬಾಳೆಹಣ್ಣು ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಈ ವೇಳೆ ಮಾತನಾಡಿದ ಮಾಜಿ ಸಚಿವ ಹೆಚ್‌ಡಿ ರೇವಣ್ಣ, ಬೇಲೂರಿನಲ್ಲಿ ಇದು ಐತಿಹಾಸಿಕ ದಿನ. ರಥೋತ್ಸವಕ್ಕೆ ಬೇಲೂರು ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದಾರೆ. ಅವರ ಕುಟುಂಬಗಳು ಯಾವುದೇ ಸಂಕಷ್ಟಕ್ಕೆ ಸಿಗಬಾರದೆಂದು ಪ್ರಾರ್ಥನೆ ಮಾಡಿ ಹೋಗಿದ್ದಾರೆ. ನಾನು ಪ್ರತಿ ವರ್ಷ ಬೇಲೂರು ಜಾತ್ರೆಗೆ ಬರುತ್ತಿದ್ದೇನೆ. ಈ ಭಾರಿ ಜಾತ್ರೆ ವೇಳೆ ಚುನಾವಣೆ ಬಂದಿದೆ. ಇವೆರಡು ರಾಷ್ಟ್ರೀಯ ಪಕ್ಷಗಳ ಸರ್ಕಾರ ಹೋಗಿ ಕುಮಾರಸ್ವಾಮಿ ಅವರ ಆಡಳಿತ ಬರಬೇಕು ಎಂದರು.

belur

ಶಾಸಕ ಕೆಎಸ್ ಲಿಂಗೇಶ್ ಮಾತನಾಡಿ ಈ ದಿನ ವಿಶ್ವವಿಖ್ಯಾತ ಚನ್ನಕೇಶವ ರಥೋತ್ಸವ ಬಹಳ ಸಾಂಪ್ರದಾಯಿಕವಾಗಿ ಭಕ್ತರ ಸಮಕ್ಷಮದಲ್ಲಿ ವಿಜೃಂಭಣೆಯಿಂದ ನೆರವೇರಿದೆ. ಶಾಂತಿ ಕಾಪಾಡಲು ಪೊಲೀಸ್, ಕಂದಾಯ, ಜಿಲ್ಲಾಡಳಿತ ಸಹಕಾರ ಕೊಟ್ಟಿದೆ. ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಹಿಂದಿನಿಂದಲೂ ಮುಸಲ್ಮಾನ ಗುರುಗಳು ಬಂದು ಇಲ್ಲಿ ಕುರಾನ್ ಪಠಣ ಮಾಡಿ ಗೌರವ ಕೊಡುತ್ತಿದ್ದಾರೆ. 2012 ರಿಂದ ಈಚೆಗೆ ರಥದ ಮುಂದೆ ಕುರಾನ್ ಪಠಣ ಮಾಡುತ್ತಿದ್ದರು. ಈ ವಿಚಾರವನ್ನೆ ದೊಡ್ಡಮಟಕ್ಕೆ ತೆಗೆದುಕೊಂಡು ಹೋಗಿ ಸಮಾಜದಲ್ಲಿ ಶಾಂತಿ ಕದಡಲು ಹೊರಟ್ಟಿದ್ದರು. ಅವರಿಗೆ ಇವತ್ತು ಉತ್ತರ ಸಿಕ್ಕಿದೆ ಎಂದರು. ಇದನ್ನೂ ಓದಿ: ಅಯೋಧ್ಯೆ ದೇವಸ್ಥಾನ ಬಳಿ ವಾಸ್ತವ್ಯ ಹೂಡಿ – ಮನೆಯಿಲ್ಲ ಎಂದಿದ್ದ ರಾಗಾಗೆ ಅರ್ಚಕ ಆಹ್ವಾನ

ಧಾರ್ಮಿಕ ದತ್ತಿ ಆಯುಕ್ತರ ಆದೇಶದಂತೆ ಈ ದಿನ ನಾನು ದೇವಾಲಯದ ಮೆಟ್ಟಿಲ ಬಳಿ ನಮ್ಮ ರೀತಿಯಂತೆ ದೇವರಿಗೆ ಶ್ಲೋಕ ಹೇಳಿ ವಂದನೆ ಸಮರ್ಪಣೆ ಮಾಡಿದ್ದೇನೆ. ದೇವಾಲಯದ ವತಿಯಿಂದ ನೀಡಿದ ಮರ್ಯಾದೆಯನ್ನು ಸ್ವೀಕರಿಸುತ್ತೇನೆ ಹಾಗೂ ಈ ದಿನ ನಾನು ಕುರಾನ್ ಪಠಣ ಮಾಡಿಲ್ಲ ಎಂದು ತಿಳಿಸಬಯಸುತ್ತೇನೆ. ರಥದ ಎದುರು ಮುಸ್ಲಿಂ ಧಾರ್ಮಿಕ ವಿಧಿಯಂತೆ ನಮಿಸುತ್ತೇನೆ ಎಂದು ಸಜ್ಜದ್ ಬಾಷಾ ಖಾದ್ರಿ ಸಾಹೇಬರು ದೇವಾಲಯದ ಲೆಟರ್ ಹೆಡ್‌ನಲ್ಲಿ ಬರೆದು ಸಹಿಮಾಡಿಕೊಟ್ಟಿದ್ದಾರೆ.

Hassana beluru temple

ಖುರಾನ್ ಪಠಣಕ್ಕೆ ತೀವ್ರ ವಿರೊಧ ವ್ಯಕ್ತವಾಗಿತ್ತು. ಹಾಗಾಗಿ ವಿರೋಧದ ನಡುವೆಯೂ ಕೂಡ ರಥದ ಸಮೀಪ ಪ್ರತ್ಯೇಕ ಜಾಗದಲ್ಲಿ ಕುರಾನ್ ಪಠಣಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕುರಾನ್ ಸಾಲುಗಳನ್ನು ಹೇಳಿದ ಖಾದ್ರಿಯವರಿಂದ ಕುರಾನ್ ಓದಿಲ್ಲ ಎಂದು ಪತ್ರ ಬರೆದು ಕೊಟ್ಟಿದ್ದರು.

43 303 Karnataka Belur Channa Keshava

ಒಟ್ಟಿನಲ್ಲಿ ಕುರಾನ್ ಪಠಣ ವಿವಾದ ಜಾತ್ರಾ ಮಹೋತ್ಸವಕ್ಕೆ ಅಡ್ಡಿಯಾಗುತ್ತದೆ ಎಂಬ ಆತಂಕ ಎದುರಾಗಿತ್ತು. ಆದರೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಬಿಗಿ ಕ್ರಮದಿಂದ ಐತಿಹಾಸಿಕ ಚನ್ನಕೇಶವಸ್ವಾಮಿ ರಥೋತ್ಸವ ಅದ್ದೂರಿಯಿಂದ ನೆರವೇರಿತು. ದೇವಸ್ಥಾನದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ರಥ ಎಳೆದು ನಿಲ್ಲಿಸಲಾಗಿದೆ. ಬುಧವಾರ ದೇವಸ್ಥಾನದ ಸುತ್ತ ಮೂರು ಸುತ್ತು ರಥೋತ್ಸವ ಜರುಗಲಿದೆ. ಇದನ್ನೂ ಓದಿ: ಮಂಡ್ಯ ಬಿಟ್ಟು ಬೇರೆ ಯಾವ ಜಿಲ್ಲೆ ಜನರಿಗೂ ಹೆಚ್‌ಡಿಕೆ ಭರವಸೆ ಮೇಲೆ ನಂಬಿಕೆಯಿಲ್ಲ – ಚಲುವರಾಯಸ್ವಾಮಿ

Share This Article