ಮಂಗಳೂರು: ವ್ಯಕ್ತಿಯೊಬ್ಬರನ್ನ ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಅಂತ ಪರಿಚಯಿಸಿ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಗಿರೀಶ್ ಮಟ್ಟಣ್ಣನವರ್ (Girish Mattannavar) ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಶ್ರೀಕ್ಷೇತ್ರ ಧರ್ಮಸ್ಥಳದ (Dharmasthala) ಭಕ್ತ ಪ್ರವೀಣ್ ಕೆ.ಆರ್ ಎಂಬುವವರು ನೀಡಿದ ದೂರಿನಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ (Belthangady Police Station) ಎಫ್‌ಐಆರ್ ದಾಖಲಾಗಿದೆ. ಮಟ್ಟಣ್ಣನವರ್, ತಿಮರೋಡಿ, ಮದನ್ ಬುಗುಡಿ ವಿರುದ್ಧ ಕೇಸ್ ದಾಖಲಾಗಿದೆ.
ಈ ಹಿಂದೆ ಮಟ್ಟಣ್ಣನವರ್ ಮಾಧ್ಯಮಗಳ ಎದುರು ಮಾತನಾಡುವ ವೇಳೆ ಮದನ್ ಬುಗುಡಿಯನ್ನ ಮಾನವ ಹಕ್ಕು ಆಯೋಗದ ಅಧಿಕಾರಿ ಎಂದು ಪರಿಚಯಿಸಿದ್ದರು. ಇದು ಸುಳ್ಳು ಎಂದು ಆರೋಪಿಸಿ ಪ್ರವೀಣ್ ದೂರು ನೀಡಿದ್ದರು. ದೂರಿನ ಆಧಾರದ ಮೇರೆಗೆ 204, 319(2), 353(2) ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ.
ಈಗಾಗಲೇ ಬುರುಡೆ ಗ್ಯಾಂಗ್ ಬೆನ್ನತ್ತಿರುವ ಎಸ್‌ಐಟಿ ಅಧಿಕಾರಿಗಳು ತನಿಖೆಯ ಹಂತವಾಗಿ ಬೆಂಗಳೂರಿಗೆ ಬಂದು ತನಿಖೆ ನಡೆಸಿದ್ದಾರೆ. ಹೀಗಾಗಿ ಮಂಡ್ಯ, ತಮಿಳುನಾಡಿಗೂ ಹೋಗಿ ವಿಚಾರಣೆ ನಡೆಸುತ್ತಾ ಅನ್ನೋ ಪ್ರಶ್ನೆಗಳು ಮೂಡಿವೆ. ಬೆಂಗಳೂರಲ್ಲಿ ನಿನ್ನೆ ಇವತ್ತು ತೀವ್ರ ಶೋಧ ನಡೆಸಿದ್ದು ಮಂಡ್ಯ, ತಮಿಳುನಾಡಿಗೂ `ಬುರುಡೆ’ ತನಿಖೆ ವಿಸ್ತರಣೆ ಆಗೋ ಸಾಧ್ಯತೆ ಇದೆ.
ಚಿನ್ನಯ್ಯನ ಹುಟ್ಟೂರು ಮಂಡ್ಯದ ಚಿಕ್ಕಬಳ್ಳಿ, 2ನೇ ಪತ್ನಿ ಜೊತೆ ಚಿನ್ನಯ್ಯ ವಾಸವಿದ್ದ ತಮಿಳುನಾಡಲ್ಲೂ ತನಿಖೆ ನಡೆಸಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರಂತೆ.ಇನ್ನು ಬುರುಡೆಗೆ ಗ್ಯಾಂಗ್‌ನ ಎ1 ಚಿನ್ನಯ್ಯನ ಪೊಲೀಸ್ ಕಷ್ಟಡಿ ನಾಳೆ ಅಂತ್ಯವಾಗಲಿದೆ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ನಾಳೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಚಿನ್ನಯ್ಯನನ್ನು ಹಾಜರುಪಡಿಸಲಿದ್ದಾರೆ. ಮತ್ತೆ ಕಸ್ಟಡಿಗೆ ಪಡೆದು ಮಂಡ್ಯ ಹಾಗೂ ತಮಿಳುನಾಡಿನಲ್ಲಿ ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ.
 


 
		 
		 
		 
		 
		
 
		 
		 
		 
		