ಸಂಪುಟ ರಚನೆಯಲ್ಲಿ ಬಳ್ಳಾರಿಯನ್ನ ಮರೆತ ಕಾಂಗ್ರೆಸ್

Public TV
1 Min Read
BYL NO MINISTER

ಬಳ್ಳಾರಿ: ಗಣಿ ನಾಡು ಬಳ್ಳಾರಿ ಕಾಂಗ್ರೆಸ್ ನ ಭದ್ರಕೋಟೆ ಅಂತಾ ಕರೆಯುತ್ತಾರೆ. ಆದರೆ ಕಾಂಗ್ರೆಸ್ ಕಷ್ಟದಲ್ಲಿದ್ದಾಗ ಕೈ ಹಿಡಿದು 8 ಕ್ಷೇತ್ರಗಳಲ್ಲಿ 6 ಕಡೆ ಗೆಲ್ಲಿಸಿದೆ ಇಂದು ಬಳ್ಳಾರಿ ಕಾಂಗ್ರೆಸ್ ನಾಯಕರನ್ನ ಮೈತ್ರಿ ಸರ್ಕಾರ ಕೈಬಿಟ್ಟಿದೆ.

ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಹಲವು ಕಡೆ ಕಾಂಗ್ರೆಸ್ ಸೋಲು ಕಂಡಿದೆ. ಆದರೆ ಬಳ್ಳಾರಿಯಲ್ಲಿ ಮಾತ್ರ ಯಾರು ನಿರೀಕ್ಷೆ ಮಾಡದಂತೆ 6 ಶಾಸಕರು ಗೆಲವು ಸಾಧನೆ ಮಾಡಿದ್ದಾರೆ. ಮೂವರು ಶಾಸಕರು ಸತತವಾಗಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ರೆ, ಮತ್ತೊಬ್ಬರು ನಾಲ್ಕು ಭಾರಿ ಗೆದ್ದವರಾಗಿದ್ದಾರೆ. ಅಲ್ಲದೇ ಬಳ್ಳಾರಿ ಜಿಲ್ಲೆಯಲ್ಲಿ ಇಬ್ಬರು ಹಿರಿಯರು ವಿಧಾನ ಪರಿಷತ್ ಸದಸ್ಯರಿದ್ದಾರೆ. ಈ 8 ಜನರ ಪೈಕಿ ಈ ಬಾರಿ ಬಳ್ಳಾರಿ ಜಿಲ್ಲೆಯಿಂದ ಇಬ್ಬರು ಸಚಿವರಾಗಿ ಆಯ್ಕೆ ಆಗುತ್ತಾರೆ ಅನ್ನೋ ವಿಶ್ವಾಸ ಎಲ್ಲರಲ್ಲೂ ಇತ್ತು. ಆದರೆ ಕಷ್ಟಕಾಲದಲ್ಲಿ ಕಾಂಗ್ರೆಸ್ ಕೈ ಹಿಡಿದ ಶಾಸಕರಿಗೆ ಹೈಕಮಾಂಡ್ ಕೈ ಕೊಟ್ಟಿರುವುದು ಮುಖಂಡರು ಮತ್ತು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

BLY

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ನಾಗೇಂದ್ರ ಮತ್ತು ಆನಂದಸಿಂಗ್ ಇಬ್ಬರು ಸಚಿವ ಸ್ಥಾನದ ಆಕ್ಷಾಂಕಿಯಾಗಿದ್ದರು. ಸಂಡೂರಿನಿಂದ ಸತತವಾಗಿ ಮೂರು ಗೆಲುವು ಸಾಧಿಸಿದ ತುಕಾರಾಂ ಹಾಗೂ ಹೂವಿನಹಡಗಲಿಯ ಪರಮೇಶ್ವರ ನಾಯ್ಕ್, ಹಗರಿಬೊಮ್ಮನಹಳ್ಳಿಯ ಭೀಮಾನಾಯ್ಕ್ ಸಹ ಲಂಬಾಣಿ ಕೋಟಾದಡಿಯಲ್ಲಿ ಸಚಿವ ಸ್ಥಾನಕ್ಕೆ ತಮ್ಮದೇ ಆದ ಲಾಬಿ ನಡೆಸಿದ್ದರು.

ಲೋಕಸಭೆ ಪ್ರತಿಪಕ್ಷದ ನಾಯಕ ಖರ್ಗೆಯವರ ಪರಮಾಪ್ತ ಎಂಎಲ್‍ಸಿ ಕೆಸಿ ಕೊಂಡಯ್ಯ ಸಹ ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನಕ್ಕೆ ಬೇಡಿಕೆಯಿಟ್ಟಿದ್ದರು. ಆದರೆ 6 ಶಾಸಕರು, ಇಬ್ಬರು ಎಂಎಲ್ ಸಿಗಳಿದ್ದರೂ ಒಬ್ಬರಿಗೂ ಸಚಿವ ಸ್ಥಾನ ನೀಡದಿರುವುದು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಇವರ ಮುಂದಿನ ನಡೆ ಕೂಡ ತೀವ್ರ ಕುತೂಹಲ ಕೆರಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *