ಮಾತು ಬಾರದ, ಕಿವಿ ಕೇಳದ 3 ವರ್ಷದ ಮಗುವಿಗೆ ಶ್ರವಣಯಂತ್ರ ಖರೀದಿಸಲು ಬೇಕಿದೆ ಸಹಾಯ

Public TV
1 Min Read
belaku bellary

ಬಳ್ಳಾರಿ: ಈ ಬಾಲಕನಿಗಿನ್ನೂ ಮೂರು ವರ್ಷ ವಯಸ್ಸು. ತೊದಲು ನುಡಿಯಾಡುತ್ತಾ ಹೆತ್ತವರನ್ನು ನಗಿಸಿ, ನಲಿಯಬೇಕಾದ ಈ ಬಾಲಕನಿಗೆ ಮಾತೇ ಬರಲ್ಲ. ಅಷ್ಟೆ ಅಲ್ಲ ಕಿವಿಯೂ ಸಹ ಕೇಳಲ್ಲ. ಹೀಗಾಗಿ ಹೆತ್ತವರಿಗೆ ಈತನದ್ದೆ ಚಿಂತೆ. ಮಗನ ಬಾಯಲ್ಲಿ ಅಮ್ಮ ಅಪ್ಪಾ ಅಂತಾ ಮಾತು ಕೇಳಲು ಹಾತೊರೆಯುತ್ತಿರುವ ಈ ಹೆತ್ತವರಿಗೆ ಮಗನಿಗೆ ಚಿಕಿತ್ಸೆ ಕೊಡಿಸಲು ಸಹ ಹಣವಿಲ್ಲ. ಹೀಗಾಗಿ ಇರೋ ಒಬ್ಬ ಮಗನಿಗೆ ಚಿಕಿತ್ಸೆ ಕೊಡಿಸಲು ದಾನಿಗಳ ಮೊರೆ ಹೋಗಿದೆ ಈ ಕುಟುಂಬ.

ಸಿರಗುಪ್ಪ ತಾಲೂಕಿನ ಅರಳಿಗನೂರು ಗ್ರಾಮದ ಪಂಪಯ್ಯಸ್ವಾಮಿ ಜಲಜಾಕ್ಷಿಯವರ ಒಬ್ಬನೇ ಮಗ ಸತೀಶನಿಗೆ 3 ವರ್ಷವಾದ್ರೂ ಮಾತು ಮೂಡಿ ಬಂದಿಲ್ಲ. ಇರೋ ಒಬ್ಬ ಮಗನಿಗೆ ಮೂರು ವರ್ಷವಾದ್ರೂ ಮಾತು ಬಾರದಿರುವುದರಿಂದ ಹೆತ್ತವರಿಗೆ ಚಿಂತೆಯಾಗಿದೆ.

ಸತೀಶನ ತಂದೆ ಪಂಪಯ್ಯಸ್ವಾಮಿ ಕಡುಬಡವ. ಬೇರೆಯವರ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಾ ಕುಟುಂಬ ಸಲಹುತ್ತಿರುವ ಪಂಪಯ್ಯಸ್ವಾಮಿಗೆ ಮಗನಿಗೆ ಮಾತು ಬರುವಂತೆ ಚಿಕಿತ್ಸೆ ಕೊಡಿಸಲು ಸಹ ಹಣಕಾಸಿನ ಕೊರತೆ ಎದುರಾಗಿದೆ. ಮೊದಲು ಕಿವಿ ಕೇಳಿದ್ರೆ ಮಾತ್ರ ಬಾಲಕ ಮಾತನಾಡಲು ಸಾಧ್ಯವೆಂದು ವೈದ್ಯರು ಹೇಳುತ್ತಿದ್ದಾರೆ. ಶ್ರವಣದೋಷದಿಂದ ಬಳಲುತ್ತಿರುವುದರಿಂದ ಶ್ರವಣ ಯಂತ್ರಕ್ಕಾಗಿ 50 ಸಾವಿರದಿಂದ ಒಂದು ಲಕ್ಷ ರೂಪಾಯಿಯವರೆಗೆ ಹಣಕಾಸಿನ ನೆರವು ಬೇಕಾಗಿದೆ. ಹೀಗಾಗಿ ಈ ಕಡುಬಡತನದ ಕುಟುಂಬದ ಮಗುವಿಗೆ ಮಾತು ಬರಲು, ಕಿವಿ ಕೇಳಲು ಶ್ರವಣಯಂತ್ರ (ಹಿಯರಿಂಗ್ ಮಷೀನ್) ಖರೀದಿಸಲು ಹಣಕಾಸಿನ ನೆರವು ನೀಡಲು ದಾನಿಗಳು ನೆರವಿನ ಹಸ್ತ ಚಾಚಬೇಕು ಅಂತಾರೆ ಸ್ಥಳೀಯರು.

ಈಗಾಗಲೇ ಹಲವು ವೈದ್ಯರ ಬಳಿ ಮಗನಿಗೆ ಚಿಕಿತ್ಸೆ ಕೊಡಿಸಲು ಹೆತ್ತವರು ಸಾಕಷ್ಟು ಹಣ ಖರ್ಚು ಮಾಡಿಕೊಂಡಿದ್ದಾರೆ. ಇದೀಗ ಮಗನಿಗೆ ಕಿವಿ ಕೇಳಲು ಮೊದಲು ಹಿಯರಿಂಗ್ ಮಷೀನ್ ಖರೀದಿಸಲು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಯಾರಾದ್ರೂ ದಾನಿಗಳು ನೆರವು ನೀಡಿದ್ರೆ ಈ ಬಡ ಬಾಲಕನಿಗೆ ಕಿವಿ ಕೇಳಲು ಸಹಾಯವಾಗಿ ಮಾತನಾಡಬಲ್ಲವನಾಗುತ್ತಾನೆ ಅನ್ನೋ ಹಂಬಲ ಪೋಷಕರದ್ದು.

https://www.youtube.com/watch?v=Drx0lVtn_zw

Share This Article
Leave a Comment

Leave a Reply

Your email address will not be published. Required fields are marked *