ಬಳ್ಳಾರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರಿಯತಮೆಯ ಗಂಡನನ್ನೇ ಮಚ್ಚಿನಿಂದ ಕೊಚ್ಚಿ ಪ್ರಿಯಕರ ಕೊಲೆ ಮಾಡಿದ ಘಟನೆಯೊಂದು ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಗಂಡನನ್ನು 33 ವರ್ಷದ ಹನುಮಂತಪ್ಪ ಎಂದು ಗುರುತಿಸಲಾಗಿದೆ. ಹನುಮಂತಪ್ಪನ ಹೆಂಡತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಹಾರಕನಾಳ ಗ್ರಾಮದ ಹನುಮಂತಪ್ಪ ಎನ್ನುವ ವ್ಯಕ್ತಿ ತಡ ರಾತ್ರಿ ಮದ್ಯಪಾನ ಮಾಡಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಈ ಇಬ್ಬರು ಹನುಮಂತಪ್ಪರು ಶನಿವಾರ ರಾತ್ರಿ ಹಿರೇಹಡಗಲಿ ಗ್ರಾಮದ ವೈನ್ ಶಾಪ್‍ನಲ್ಲಿ ಕುಡಿದು ರಾತ್ರಿ ಮನೆಗೆ ಮರಳುವ ಸಂದರ್ಭದಲ್ಲಿ ತುಂಬಿನಕೇರಿ ಗ್ರಾಮದ ಬಳಿಯ ಹಳ್ಳದಲ್ಲಿ ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ. ಈ ಇಬ್ಬರ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆಯಾಗಿರುವ ಹನುಮಂತಪ್ಪನಿಗೆ ಕಂಠಪೂರ್ತಿ ಕುಡಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಈ ಸಂಬಂಧ ಆರೋಪಿ ಹನುಮಂತಪ್ಪನನ್ನು ವಶಕ್ಕೆ ಪಡೆದಿರುವ ಹಿರೇಹಡಗಲಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.