ರಾಣಿ ಚನ್ನಮ್ಮ ವಿವಿ, ದೆಹಲಿ ಜೆಎನ್‍ಯು ವಿವಿಯಂತೆ ಆಗಬಾರದು: ಸಂಸದ ಸುರೇಶ್ ಅಂಗಡಿ

Public TV
2 Min Read
MP Suresh Angadi

ಬೆಳಗಾವಿ: ಮಾಜಿ ಸಚಿವ ಜಾರಕಿಹೊಳಿ ಅವರ ಬೆಂಬಲಿಗರು ಎನ್ನಲಾದ ಕೆಲ ಕಾಂಗ್ರೆಸ್ ಕಾರ್ಯಕರ್ತರು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ದಾಂಧಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸುರೇಶ್ ಅಂಗಡಿ ಕಿಡಿಕಾರಿದ್ದಾರೆ. ಅಲ್ಲದೇ ರಾಣಿ ಚನ್ನಮ್ಮ ವಿವಿ ಮತ್ತೊಂದು ದೆಹಲಿಯ ಜೆಎನ್‍ಯು ವಿವಿ ಆಗಬಾರದು ಎಂದು ಹೇಳಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸಂಸದರು, ಚೆನ್ನಮ್ಮ ವಿಶ್ವ ವಿದ್ಯಾಲಯದ ದಾಂಧಲೆ ಪ್ರಕರಣ ಬೆಳಗಾವಿಗೆ ಕಪ್ಪು ಚುಕ್ಕೆ ಆಗಲಿದೆ. ಕಳೆದ 30 ವರ್ಷಗಳ ಹೋರಾಟದಿಂದ ವಿವಿ ಸ್ಥಾಪನೆ ಆಗಿದೆ. ವಿವಿಯಲ್ಲಿ ಪಕ್ಷ ರಾಜಕೀಯ ಬೇಡ. ರಾಣಿ ಚನ್ನಮ್ಮ ವಿವಿ ದೆಹಲಿ ಜೆಎನ್‍ಯು ವಿವಿಯಂತೆ ಆಗಬಾರದು. ದೇಶ ದ್ರೋಹಿಗಳನ್ನು ರಾಣಿ ಚನ್ನಮ್ಮ ವಿವಿಯಲ್ಲಿ ಬಿಟ್ಟಿರಬಹುದು. ಆದರೆ ನಾವು ಅದನ್ನು ಸಹಿಸುವುದಿಲ್ಲ. ವಿಶ್ವ ವಿದ್ಯಾಲಯ ಕುಲಪತಿ ಕೂಡಲೇ ಕಠಿಣ ಕ್ರಮಕೈಗೊಳ್ಳಬೇಕು ಆಗ್ರಹಿಸಿದರು.

MP Suresh Angadi 1

ಇದೇ ವೇಳೆ ವಿವಿಯ ಮುಂಭಾಗದಲ್ಲಿ ಅಂಡರ್ ಪಾಸ್ ಉದ್ಘಾಟನೆ ವಿಚಾರ ಪ್ರಸ್ತಾಪಿಸಿದ ಅವರು, ಉದ್ಘಾಟನೆ ವೇಳೆಯಲ್ಲಿ ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ, ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಫೋನ್ ಮಾಡಿ ಆಗಮಿಸುವಂತೆ ಮನವಿ ಮಾಡಲು ಮುಂದಾಗಿದ್ದೆ. ಆದರೆ ಅವರಿಬ್ಬರು ನನ್ನ ಫೋನ್ ಕರೆ ಸ್ವೀಕರಿಸಲಿಲ್ಲ. ಈ ವೇಳೆ ನಾನೇ ಸ್ವತಃ ಹೋಗಿ ಉದ್ಘಾಟನೆ ಪೂಜೆ ನೆರವೇರಿಸಿದೆ. ಈ ಕಾರ್ಯಕ್ರಮಕ್ಕೆ ವಿವಿಯ ಕುಲಪತಿಗಳಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಒಂದೊಮ್ಮೆ ಮಾಜಿ ಸಚಿವರಾದ ಸತೀಶ ಜಾರಕಿಹೊಳಿ ತಮ್ಮ ಬೆಂಬಲಿಗರು ಈ ರೀತಿ ನಡೆಸಿದ್ದಾರೆ ಕ್ರಮಕೈಗೊಳ್ಳಬೇಕು. ಸ್ವತಃ ಸತೀಶ್ ಅವರನ್ನೇ ಈ ಮೂಲಕ ಕೇಳಿಕೊಳ್ಳುತ್ತೇನೆ. ನಿಮ್ಮ ಬೆಂಬಲಿಗರಾದರೆ ಕ್ರಮಕೈಗೊಳ್ಳಿ. ಇಲ್ಲವೇ ಪೊಲೀಸರು ಕ್ರಮ ತೆಗೆದುಕೊಳ್ಳಲು ಅವಕಾಶ ನೀಡಿ ಎಂದು ಮನವಿ ಮಾಡುವುದಾಗಿ ತಿಳಿಸಿದರು. ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳ ವೈಫಲ್ಯವನ್ನು ಟೀಕಿಸಿದ ಸಂಸದರು ರಾಜಕೀಯ ಒತ್ತಡದಿಂದ ಅಧಿಕಾರಿಗಳು ಭಯ ಪಡುತ್ತಿದ್ದಾರೆ. ಆದರೆ ಕಠಿಣ ಕ್ರಮ ಕೈಗೊಳ್ಳದೆ ಇದ್ದರೆ ಅಧಿಕಾರಿಗಳು ಜಾಗ ಖಾಲಿ ಮಾಡಬೇಕು ಎಂದು ಆಗ್ರಹಿಸಿದರು.

BLG RCU 2

ಏನಿದು ಘಟನೆ? ರಾಣಿಚನ್ನಮ್ಮ ವಿಶ್ವವಿದ್ಯಾಲಯಲ್ಲಿ ಸೋಮವಾರ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕುಲಪತಿ ಶಿವಾನಂದ ಹೊಸಮನಿ ಅವರನ್ನು ಮುತ್ತಿಗೆ ಹಾಕಿ ನೂಕಾಡಿದ್ದರು. ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದೇ ಇರುವುದು ಕಾರ್ಯಕರ್ತರ ಕೋಪಕ್ಕೆ ಕಾರಣವಾಗಿತ್ತು ಎನ್ನಲಾಗಿತ್ತು. ಈ ವೇಳೆ ಬೆಳಗಾವಿ ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದು ಸುಣಗಾರ್ ಹಾಗೂ ಕೆಲವು ಬೆಂಬಲಿಗರು ಕುಲಪತಿ ಅವರನ್ನು ಸುತ್ತುವರಿಯಲು ಯತ್ನಿಸಿದ್ದರು. ಘಟನೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಕುಲಪತಿ ಶಿವಾನಂದ ಹೊಸಮನಿ ಹಿಂದೇಟು ಹಾಕಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

BLG RCU 1

Share This Article
Leave a Comment

Leave a Reply

Your email address will not be published. Required fields are marked *