– ಜಾರಕಿಹೊಳಿ ಗುಂಪಿಗೆ ಆರಂಭಿಕ ಮೇಲುಗೈ
– 6 ತಾಲೂಕಿನಲ್ಲಿ ಅವಿರೋಧ ಆಯ್ಕೆ
ಬೆಳಗಾವಿ: ಜಿಲ್ಲೆಯಲ್ಲಿ ಜಿದ್ದಾಜಿದ್ದಿಗೆ ಕಾರಣವಾಗಿರುವ ಡಿಸಿಸಿ ಬ್ಯಾಂಕ್ ಚುನಾವಣೆಗೆ (DCC Bank) ಶನಿವಾರ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದೆ. 16 ನಿರ್ದೇಶಕ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣಾ ಕಣದಲ್ಲಿ ಘಟಾನುಘಟಿ ನಾಯಕರೇ ಅಖಾಡಕ್ಕೆ ಇಳಿದಿದ್ದಾರೆ. ಆರಂಭದ ಹಂತದಲ್ಲೇ ಜಾರಕಿಹೊಳಿ ಬ್ರದರ್ಸ್ (Jarkiholi Brothers) ಗುಂಪು ಮೆಲುಗೈ ಸಾಧಿಸಿದೆ.
ಅ.19 ರಂದು ನಡೆಯಲಿರುವ ಮತದಾನಕ್ಕೆ ಈ ವರೆಗೂ ಒಟ್ಟು 64 ನಾಮಪತ್ರ ಸಲ್ಲಿಕೆಯಾಗಿವೆ. ಈ ಪೈಕಿ ಆರು ತಾಲೂಕಿನಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದು ಆರಂಭದಲ್ಲೇ ಜಾರಕಿಹೊಳಿ ಗುಂಪು ಮೇಲುಗೈ ಸಾಧಿಸಿದೆ.
ಹಾಲಿ, ಮಾಜಿ ಶಾಸಕರು ಸೇರಿದಂತೆ ಮಾಜಿ ಸಂಸದರು ಕೂಡ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದಾರೆ. ಅದರಲ್ಲೂ ಈಗಾಗಲೇ ಜಾರಕಿಹೊಳಿ ಬ್ರದರ್ಸ್ 13 ಜನರ ತಂಡವನ್ನು ಸಿದ್ಧಪಡಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಥಣಿ, ಕಾಗವಾಡ ಮತ್ತು ಚಿಕ್ಕೋಡಿ ತಾಲೂಕಿನಲ್ಲಿ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಬೇರೆ ಕಡೆಗಳಲ್ಲಿ ತಮ್ಮವರನ್ನು ಅಖಾಡಕ್ಕಿಳಿಸಿದ್ದಾರೆ.
ರಮೇಶ್ ಕತ್ತಿ (Ramesh Katti) ಮತ್ತು ಲಕ್ಷ್ಮಣ ಸವದಿ (Laksham savdi) ನಡೆ ಇನ್ನೂ ನಿಗೂಢವಾಗಿದ್ದು ಜಾರಕಿಹೊಳಿ ಸಹೋದರರಿಗೆ ಶಾಕ್ ಕೊಡಲು ಮಾಸ್ಟರ್ ಪ್ಲ್ಯಾನ್ ಮಾಡ್ತಿದ್ದಾರೆ. ಸದ್ಯ ಆರಂಭಿಕ ಹಂತದಲ್ಲಿ ಜಾರಕಿಹೊಳಿ ಬ್ರದರ್ಸ್ ಮೇಲುಗೈ ಸಾಧಿಸಿದ್ದು ಆರು ತಾಲೂಕಿನ ಪೈಕಿ ಐದು ಜಾರಕಿಹೊಳಿ ಬ್ರದರ್ಸ್ ಗುಂಪಿನವರು ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: DCC Bank Election| ಮೇಲೆ ಕುಳಿತವನು ಆಟ ಆಡಿಸ್ತಾನೆ, ನಾವೆಲ್ಲ ಗೊಂಬೆಗಳು: ಲಕ್ಷ್ಮಣ ಸವದಿ
ಅವಿರೋಧ ಆಯ್ಕೆ: ಗೋಕಾಕ್‌ನಿಂದ ಶಾಸಕ ರಮೇಶ್ ಜಾರಕಿಹೊಳಿ ಪುತ್ರ ಅಮರನಾಥ್ ಜಾರಕಿಹೊಳಿ, ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಬೆಳಗಾವಿ ತಾಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಯರಗಟ್ಟಿಯಿಂದ ವಿಶ್ವಾಸ್ ವೈದ್ಯ, ಸವದತ್ತಿಯಿಂದ ವಿರೂಪಾಕ್ಷ ಮಾಮನಿ, ಮೂಡಲಗಿ ನೀಲಕಂಠ ಜಾರಕಿಹೊಳಿ ಗುಂಪಿನಲ್ಲಿದ್ದವರು ಅವಿರೋಧ ಆಯ್ಕೆಯಾದರೆ ಇತ್ತ ಯಾವುದೇ ಗುಂಪಿನಲ್ಲಿ ಗುರುತಿಸಿಕೊಳ್ಳದೇ ಚಿಕ್ಕೋಡಿಯಿಂದ ನಾಮಪತ್ರ ಸಲ್ಲಿಸಿದ್ದ ಶಾಸಕ ಗಣೇಶ್ ಹುಕ್ಕೇರಿ ಕೂಡ ಆಯ್ಕೆಯಾಗಿದ್ದಾರೆ.
ಶನಿವಾರ ಮಧ್ಯಾಹ್ನ ಮೂರು ಗಂಟೆಯವರೆಗೂ ಕಾದು ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆ ಶಾಸಕ ವಿಶ್ವಾಸ್ ವೈದ್ಯ, ನೀಲಕಂಠ, ಗಣೇಶ್ ಹುಕ್ಕೇರಿ ಬೆಂಬಲಿಗರು ಗುಲಾಲ್ ಹಚ್ಚಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಜಾರಕಿಹೊಳಿ ಪರ ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದರು.
ಒಂದು ಕಡೆ ಜಾರಕಿಹೊಳಿ ಬ್ರದರ್ಸ್ ಆರಂಭಿಕ ಹಂತದಲ್ಲಿ ಮೇಲುಗೈ ಸಾಧಿಸಿದರೂ ಠಕ್ಕರ್ ಕೊಡಲು ಲಕ್ಷ್ಮಣ ಸವದಿ ಹಾಗೂ ರಮೇಶ್ ಕತ್ತಿ ಮಾಸ್ಟರ್ ಪ್ಲ್ಯಾನ್ ಮಾಡ್ತಿದ್ದಾರೆ. ಹೇಗಾದರೂ ಮಾಡಿ ಅಧ್ಯಕ್ಷಗಾದಿ ಹಿಡಿಯಬೇಕು ತಮ್ಮ ಹಿಡಿತದಲ್ಲಿ ಡಿಸಿಸಿ ಬ್ಯಾಂಕ್ ಸಾಧಿಸಬೇಕು ಎಂಬ ನಿಟ್ಟಿನಲ್ಲಿ ಪ್ಲ್ಯಾನ್ ಮಾಡ್ತಿದ್ದು ಅ.19ರ ವರೆಗೂ ಕಾದು ನೋಡಿ ಅಂತಿದ್ದಾರೆ.
ಇದೇ ಮೊದಲ ಬಾರಿಗೆ ಅಣ್ತಮ್ಮಂದಿರು ತಾವು ಸ್ಪರ್ಧೆ ಮಾಡುವುದನ್ನ ಬಿಟ್ಟು ತಮ್ಮ ಕುಡಿಗಳಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದು ಈ ಮೂಲಕ ಜಾರಕಿಹೊಳಿ ಮನೆತನದ ಎರಡನೇ ಪೀಳಿಗೆ ಅಧಿಕೃತವಾಗಿ ರಾಜಕೀಯ ರಂಗ ಪ್ರವೇಶ ಮಾಡಿದೆ. ಈ ಕುರಿತು ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ತಾವು ಎಳೆದುಕೊಂಡು ಹೋಗುತ್ತಿರುವ ತೇರನ್ನು ಮಕ್ಕಳು ಎಳೆಯಬೇಕು ಜನರ ಸೇವೆ ಮಾಡಬೇಕೆನ್ನುವ ಉದ್ದೇಶದಿಂದ ಚುನಾವಣೆಗೆ ನಿಲ್ಲಿಸಿದ್ದಾಗಿ ಹೇಳಿದ್ದಾರೆ.
ತಾನು ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎನ್ನುತ್ತಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಎಂಟ್ರಿಯಾಗಿದ್ದಾರೆ. ಸಹಕಾರಿ ಸಂಘಗಳ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದ್ದು ಜಾರಕಿಹೊಳಿ ಸಹೋದರರ ಮತ್ತೊಂದು ದಾಳ ಅಂತಾ ಹೇಳಲಾಗುತ್ತಿದ್ದು ಬಾಲಚಂದ್ರ ಜಾರಕಿಹೊಳಿ ಕೂಡ ರಾಜಕಾರಣದಲ್ಲಿ ಎಲ್ಲವೂ ಮಾಡಬೇಕು ಅಂತಾ ಹೇಳಿದ್ದಾರೆ.
ಒಟ್ಟಿನಲ್ಲಿ ಸಾಕಷ್ಟು ಜಿದ್ದಾಜಿದ್ದಿಗೆ ಕಾರಣವಾಗಿರುವ ಡಿಸಿಸಿ ಬ್ಯಾಂಕ್ ಚುನಾವಣೆಗೆ ಅಕ್ಟೋಬರ್ 19ರಂದು ಮತದಾನ ನಡೆಯಲಿದ್ದು ಈಗಾಗಲೇ ಆರು ತಾಲೂಕಿನಲ್ಲಿ ಯಾವುದೇ ನಾಮ ಪತ್ರ ಸಲ್ಲಿಕೆಯಾಗದ ಹಿನ್ನೆಲೆ ಅವಿರೋಧ ಆಯ್ಕೆ ಖಚಿತವಾಗಿದ್ದು ಅಧಿಕೃತ ಘೋಷಣೆ ಒಂದೇ ಬಾಕಿ ಇದೆ. ಇತ್ತ ಜಾರಕಿಹೊಳಿ ಬ್ರದರ್ಸ್ ಕಡೆಯಿಂದ ಡಿಸಿಸಿ ಬ್ಯಾಂಕ್ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಲಿಂಗಾಯತ ಅಸ್ತ್ರ ಪ್ರಯೋಗ ಆಗಿದ್ದು ಇದರಿಂದ ತಮ್ಮ ಗುಂಪು ಗೆದ್ದರೆ ಲಿಂಗಾಯತರೇ ಅಧ್ಯಕ್ಷ ಅಂತಾ ಬಾಲಚಂದ್ರ ಹೇಳಿದ್ದು ಮತ್ತಷ್ಟು ರೋಚಕತೆ ಹೆಚ್ಚಿಸಿದೆ.