ಬೆಳಗಾವಿ: ತ್ಯಾಗಕ್ಕೆ ಇನ್ನೊಂದು ಹೆಸರು ಹೆಣ್ಣು. ಮನೆಯ ಆರ್ಥಿಕತೆಯನ್ನು ಸುಧಾರಿಸಲು ದಿನನಿತ್ಯ ಮಹಿಳೆಯರು ಶ್ರಮಿಸುತ್ತಾರೆ. ಪುರುಷರ ಏಳಿಗೆಗೆ ಮಹಿಳೆ ಪಾತ್ರ ಅನನ್ಯವಾಗಿದೆ. ಮಹಿಳೆಯರಿಂದ ಆರಂಭ, ಮಹಿಳೆಯರಿಂದಲೇ ಅಂತ್ಯ ಎಂದು ಹೇಳುವ ಮೂಲಕ ತಮ್ಮ ವಿರೋಧಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಹಣಕಾಸಿನ ಇಲಾಖೆ ಹಾಗೂ ಉನ್ನತ ಹುದ್ದೆ ಸರ್ಕಾರ ಕರುಣಿಸಬೇಕಿದೆ ಎಂದು ಹೇಳುವ ಮೂಲಕ ಸರ್ಕಾರಕ್ಕೆ ಟಾಂಗ್ ಕೊಟ್ಟರು. ಮಹಿಳೆಯರು ಅಂದಾಕ್ಷಣ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾತ್ರ ನೀಡುತ್ತೀರಿ. ಬೇರೊಂದು ಇಲಾಖೆ ನೀಡಬೇಕು. ಅದನ್ನು ನಿಭಾಯಿಸುವ ಶಕ್ತಿ ಮಹಿಳೆಯರಿಗೆ ಇದೆ. ಶೇ.50 ಮಹಿಳೆಯರಿಗೆ ಮೀಸಲಾತಿ ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ಅವಕಾಶ ನೀಡಿದ್ದು ಕಾಂಗ್ರೆಸ್ ಪಕ್ಷ. ಮಹಿಳೆಯರನ್ನು ಸಮಾಜದಲ್ಲಿ ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಶಶಿಕಲಾ ಜೊಲ್ಲೆ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಲಾಗಿದೆ ಹಣಕಾಸು ಅಥವಾ ಪಂಚಾಯತ್ ರಾಜ್ಯ ನೀಡಲಿ ಎಂದರು.
ಅಂಗನವಾಡಿ ಮೇಲ್ ದರ್ಜೆಗೆ ಏರಿಸಲು ಹಾಗೂ ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡಲು ಸಚಿವೆ ಶ್ರಮಿಸಬೇಕೆಂದು ಇದೇ ವೇಳೆ ಮನವಿ ಮಾಡಿಕೊಂಡರು. ಮಳೆಗೆ ಬಿದ್ದಿರುವ ಅಂಗನವಾಡಿ ದುಸ್ಥಿತಿಗೆ ಅನುದಾನ ಬಿಡುಗಡೆ ಮಾಡಿ. ಮಹಿಳೆಯರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಸರ್ಕಾರ ಮಾತ್ರ ಎರಡನೇಯ ಅಧಿಕಾರ ಚುಕ್ಕಾಣಿ ಹಿಡಿಯಲು ಸಾಧ್ಯ ಎಂದರು.
ಹೆಬ್ಬಾಳ್ಕರ್ ವಿರುದ್ಧ ಕರವೇ ಪ್ರತಿಭಟನೆ: ರಾಜ್ಯ ಸರ್ಕಾರದ ಅನುದಾನದಿಂದ ಬೆಳಗಾವಿ ತಾಲೂಕಿನ ರಾಜಹಂಸಗಢದಲ್ಲಿ ಶಿವಾಜಿ ಮೂರ್ತಿ ಸ್ಥಾಪನೆ ಕಾರ್ಯಕ್ರಮದಲ್ಲಿ ಕನ್ನಡವನ್ನು ಗಡೆಗಣಿಸಿ, ಮರಾಠಿ ಪ್ರೇಮ ಮೆರೆದ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಸರ್ಕಾರಿಂದ 4 ಕೋಟಿ ರೂ. ಅನುದಾನದಲ್ಲಿ ರಾಜಹಂಸಗಢದಲ್ಲಿ ಶಿವಾಜಿ ಮೂರ್ತಿ ಸ್ಥಾಪನೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಕನ್ನಡ ಹಾಗೂ ಕನ್ನಡಿಗರನ್ನು ಕಡೆಗಣಿಸಲಾಗಿದೆ. ಇದರಿಂದ ಕನ್ನಡಿಗರ ಸ್ವಾಭಿಮಾನಕ್ಕೆ ತೀವ್ರ ಧಕ್ಕೆಯುಂಟಾಗಿದೆ. ಕನ್ನಡ ನಾಡಿನವರಾದ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ ಸೇರಿದಂತೆ ಐತಿಹಾಸಿಕ ಹೋರಾಟಗಾರರ ಮೂರ್ತಿಗಳನ್ನು ಸ್ಥಾಪಿಸದೆ, ಕೇವಲ ವೋಟ್ ಬ್ಯಾಂಕ್‍ಗಾಗಿ ಮರಾಠಿಗರ ಓಲೈಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಅನುದಾನದಿಂದ ಶಿವಾಜಿ ಮಹಾರಾಜರ ಮೂರ್ತಿ ಸ್ಥಾಪನೆ ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.