ಬೆಳಗಾವಿ: ಮೋದಿ ಅವರ ಕ್ಯಾಬಿನೆಟ್ ಕರ್ನಾಟಕದ ಪ್ರಬಲ ಲಿಂಗಾಯುತ ಸಮುದಾಯವನ್ನು ಕಡೆಗಣಿಸಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಮತ್ತು ದೇಶದಲ್ಲಿ ಲಿಂಗಾಯತ ಸಮುದಾಯ ಬಿಜೆಪಿ ಪಕ್ಷವನ್ನು ಬೆಂಬಲಿಸಿದೆ. ಈ ಕಾರಣದಿಂದ ಮೋದಿ ಸಂಪುಟದಲ್ಲಿ ಲಿಂಗಾಯತರಿಗೆ ಹೆಚ್ಚಿನ ಸ್ಥಾನಮಾನ ನೀಡಬೇಕಾಗಿದೆ. ಆದರೆ ಕೇಂದ್ರದ ಸಂಪುಟದಲ್ಲಿ ಪ್ರಬಲ ಸಮುದಾಯವನ್ನು ಕಡೆಗಣಿಸಿದೆ ಎಂದು ಅಸಮಾಧಾನ ಹೊರ ಹಾಕಿದರು.
ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಈ ಬಾರಿಯ ಕೇಂದ್ರ ಸಚಿವ ಸಂಪುಟದಲ್ಲಿ ಮಂತ್ರಿ ಪದವಿ ತಪ್ಪಿದರ ಬಗ್ಗೆ ಪ್ರತಿಕ್ರಿಯಿಸಿದ ಅವರು ಕೆಲವರು ಎಕ್ಸ್ ಆಗುತ್ತಾರೆ ಕೆಲವರು ವೈ ಆಗುತ್ತಾರೆ. ಜಿಗಜಿಣಗಿ ಹಾಗೂ ಅಪ್ಪು ಪಟ್ಟಣಶೆಟ್ಟಿ ಒಂದಾಗಿದ್ದಾರೆ. ಜಿಗಜಿಣಗಿ ಅವರಿಗೆ ಭಗವಂತ ಒಳ್ಳೆಯ ಬುದ್ಧಿ ನೀಡಲಿ ಎಂದು ಹೇಳಿದರು.
ಇದೇ ವೇಳೆ ಶಿವು ಉಪ್ಪಾರ ಸಾವು ಪ್ರಕರಣದ ಬಗ್ಗೆ ಮಾತನಾಡಿ, ಪೊಲೀಸ್ ಇಲಾಖೆಯ ಕೆಲವು ಜನ ಅಧಿಕಾರಿಗಳು ಇದರಲ್ಲಿ ಶಾಮಿಲಾಗಿದ್ದಾರೆ ಎಂಬ ಭಾರಿ ಆರೋಪವಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಗೋರಕ್ಷರು ಬೆಳಗಾವಿಗೆ ಬಂದು ಬೆಳಗಾವಿ ಚಲೋ ಆಂದೋಲನ ಪ್ರಾರಂಭ ಮಾಡಲಿದ್ದಾರೆ. ರಸ್ತೆಗಿಳಿದು ಪ್ರತಿಭಟನೆ ಮಾಡಿ ಸಾಮ, ದಾನ, ಭೇದ, ದಂಡದ ಮೂಲಕ ತಕ್ಕ ಉತ್ತರ ನೀಡುತ್ತವೆ ಎಂದು ರಾಜ್ಯ ಸರ್ಕಾರಕ್ಕೆ ಯತ್ನಾಳ್ ಎಂಟು ದಿನಗಳ ಗಡವು ನೀಡಿದ್ದಾರೆ.