ತನ್ನಿಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಆಸೆ ಹೊಂದಿರುವ ತಾಯಿಗೆ ಬೇಕಿದೆ ಸಹಾಯ

Public TV
2 Min Read
HSN Belaku 1

ಹಾಸನ: ಕಳೆದ ಏಳು ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡಿರುವ ಮಹಿಳೆಯೊಬ್ಬರು, ತನ್ನ ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗದ ಅಸಹಾಯಕ ಸ್ಥಿತಿಯಲ್ಲಿ ಬೆಳಕು ಕಾರ್ಯಕ್ರಮಕ್ಕೆ ಸಹಾಯ ಕೇಳಿಕೊಂಡು ಬಂದಿದ್ದಾರೆ.

ಮೂಲತಃ ಮಂಗಳೂರಿನ ಪಡುಬಿದ್ರೆಯ ಮುಲ್ಕಿಯ ಪ್ರಭಾವತಿ ಅವರು ಕುಮಾರಜ್ಯೋಗೆ ಎಂಬವರನ್ನು ಮದುವೆಯಾಗಿದ್ದರು. ಮದುವೆ ಬಳಿಕ ಹಾಸನ ತಾಲೂಕಿನ ಬಸ್ತಿಹಳ್ಳಿ ಗ್ರಾಮಕ್ಕೆ ವಲಸೆ ಬಂದು ನೆಲೆಸಿದ್ದರು. ಆದರೆ ಕುಡಿತದ ಚಟ ಹೊಂದಿದ್ದ ಪತಿ ಕುಮಾರಜ್ಯೋಗೆ 7 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಈ ವೇಳೆಗೆ ದಂಪತಿಗೆ ಇಬ್ಬರು ಮಕ್ಕಳಾಗಿತ್ತು. ಪತಿ ಮರಣ ನಂತರ ಇಬ್ಬರು ಚಿಕ್ಕಮಕ್ಕಳೊಂದಿಗೆ ಪ್ರಭಾವತಿ ಅವರು ದಿಕ್ಕುತೋಚದಂತಾಗಿ ಜೀವನ ನಡೆಸಿದ್ದಾರೆ.

 

ಪತಿ ಆಕಾಲಿಕ ಮರಣದಿಂದ ಇಬ್ಬರು ಮಕ್ಕಳ ಜವಾಬ್ದಾರಿ ಹೊತ್ತ ಇವರು, ಭಿಕ್ಷೆ ಬೇಡಿ ತಮ್ಮ ಮಕ್ಕಳನ್ನು ಬೆಳೆಸಿದ್ದಾರೆ. ಸದ್ಯ ಸರ್ಕಾರದಿಂದ ನೀಡಿರುವ ಒಂದು ಪುಟ್ಟ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ತನ್ನ ಮಕ್ಕಳು ನನ್ನಂತೆ ಭಿಕ್ಷಾಟನೆಗೆ ಹೋಗಬಾರದು ಎಂಬ ಕನಸು ಹೊಂದಿರುವ ಪ್ರಭಾವತಿ ಅವರು ಗುಜರಿ ಹಾಯುವ ಕೆಲಸ ಮಾಡುತ್ತ ಜೀವನ ನಡೆಸುತ್ತಿದ್ದಾರೆ.

HSN Belaku 2

ಸದ್ಯ ಪ್ರಭಾವತಿ ಅವರ ಮೊದಲ ಮಗ ಮಂಜುನಾಥ್ ಬಸ್ತಿಹಳ್ಳಿಯ ಸಮೀಪದ ಮೊಸಳೆಹೊಸಳ್ಳಿ ಗ್ರಾಮದ ಶಾಲೆಯಲ್ಲಿ 7ನೇ ತರಗತಿ ಹಾಗೂ ಮಗಳು ಕೀರ್ತಿ 6ನೇ ತರಗತಿಯಲ್ಲಿ ಓದುತ್ತಿದ್ದಾರೆ. ಜೀವನ ನಿರ್ವಹಣೆ ಕಷ್ಟ ಇರುವ ಸಮಯದಲ್ಲಿ ಪ್ರಭಾವತಿ ಅವರು ಕಷ್ಟಪಟ್ಟು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದ್ದಾರೆ. ಶಾಲೆಗೆ ತೆರಳಲು ಬಸ್ ಸೌಲಭ್ಯ ಇದ್ದರೂ ಬಸ್ ಪಾಸ್ ಪಡೆಯಲು ಇಲ್ಲದ ಕಾರಣ 5 ಕಿಮೀ ದೂರದ ಶಾಲೆಗೆ ದಿನನಿತ್ಯ ಕಷ್ಟಪಟ್ಟು ಹೋಗುತ್ತಿದ್ದಾರೆ.

ಬಡತನದ ಕಹಿಯನ್ನ ಜೀವನದ ಆರಂಭದಲ್ಲಿಯೇ ಅರಿತಿರುವ ಮಂಜುನಾಥ್ ಹಾಗೂ ಕೀರ್ತಿ ಶಿಕ್ಷಣದಲ್ಲಿ ಮುಂದಿದ್ದಾರೆ. ಬಾಲಕಿ ಕೀರ್ತಿ ಸಣ್ಣ ವಯಸ್ಸಿನಾವಳದ ಕಾರಣ ಆಕೆಗೆ ಬಡತನದ ಸ್ಥಿತಿಯ ಅರಿವಿಲ್ಲ. ಆದರೆ ಇಬ್ಬರು ಉತ್ತಮ ಶಿಕ್ಷಣ ಪಡೆಯುವ ಕನಸು ಹೊಂದಿದ್ದಾರೆ. 9ನೇ ತರಗತಿ ಇರಬೇಕಿದ್ದ ಮಂಜುನಾಥ್ ಬಡತನದ ಕಾರಣದಿಂದ 7ನೇ ತರಗತಿ ವ್ಯಾಸಂಗ ನಡೆಸುತ್ತಿದ್ದಾನೆ. ದಿನನಿತ್ಯದ ಊಟಕ್ಕೂ ಕಷ್ಟ ಪಡುತ್ತಿರುವ ಈ ಕುಟುಂಬಕ್ಕೆ ದಾನಿಗಳು ಸಹಾಯ ಮಾಡಿ ಎಂದು ನೆರೆಹೊರೆಯವರೂ ಮನವಿ ಮಾಡಿದ್ದಾರೆ. ಪತಿ ಕಳೆದು ಕೊಂಡು ತನ್ನಿಬ್ಬರು ಮಕ್ಕಳಿಗೆ ಭಿಕ್ಷೆ ಬೇಡಿಯಾದ್ರೂ ಶಿಕ್ಷಣ ಕೊಡಿಸಬೇಕು ಎನ್ನುವ ಪ್ರಭಾವತಿ ವರಿಗೆ ಸಹಾಯದ ಅವಶ್ಯಕತೆ ಇದೆ.

https://youtu.be/SLX5W03K18s

Share This Article
Leave a Comment

Leave a Reply

Your email address will not be published. Required fields are marked *