ಉಡುಪಿ: ಈಕೆ ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿರುವ ಹುಡುಗಿ. ಯಕ್ಷಗಾನ ಹಾಗೂ ಭರತನಾಟ್ಯದಲ್ಲಿ ಚಿಕ್ಕಂದಿನಲ್ಲೇ ಪರಿಣತಿ ಪಡೆದಾಕೆ. ಇಷ್ಟೆಲ್ಲಾ ಇದ್ರೂ ಆಕೆಯ ಮನೆಯಲ್ಲಿ ಮಾತ್ರ ಕಿತ್ತು ತಿನ್ನುವ ಬಡತನ. ಇದರಿಂದ ಭರತನಾಟ್ಯಮತ್ತು ಕಲೆಯನ್ನು ಮುಂದುವರಿಸಲಾಗದ ಸ್ಥಿತಿ ಆಕೆಯದ್ದು. ಉಡುಪಿಯ ಕೋಟದಿಂದ ಬಂದಿರುವ ನಿಶಾ ಇದೀಗ ಬೆಳಕಿನ ನಿರೀಕ್ಷೆಯಲ್ಲಿದ್ದಾಳೆ.
ನಿಶಾ ಉಡುಪಿ ಜಿಲ್ಲೆಯಲ್ಲಿನ ಜ್ಞಾನಪೀಠ ಪ್ರಶಸ್ತಿ ವಿಜೇತ ಕೋಟ ಶಿವರಾಮ ಕಾರಂತರ ಊರಿನವಳು. ಈಕೆ ತಾಯಿಯ ಹೊಟ್ಟೆಯಲ್ಲಿ ಹುಟ್ಟುತ್ತಲೇ ನೋವುಂಡವಳು. ನಿಶಾಳ ತಾಯಿ ಶಾರದಾಗೆ ಎರಡೂ ಕಿಡ್ನಿ ಫೇಲಾಗಿತ್ತು. ತನ್ನ ದೊಡ್ಡಮ್ಮ ಕಿಡ್ನಿ ನೀಡಿ ನಿಶಾಳ ಅಮ್ಮನನ್ನು ಬದುಕಿಸಿದ್ದರು. ದೊಡ್ಡಮ್ಮ, ಅಜ್ಜಿ, ಮಾವ ಸೇರಿ ಮನೆಯಲ್ಲಿ ಒಟ್ಟು ಏಳು ಜನ. ಎಲ್ಲರನ್ನು ಸಾಕುವ ಜವಾಬ್ದಾರಿ ನಿಶಾಳ ಅಪ್ಪ ರಾಘುವಿನ ಹೆಗಲ ಮೇಲಿದೆ. ಮೇಸ್ತ್ರಿ ಕೆಲಸ ಮಾಡುವ ರಾಘುವಿಗೆ ಸಂಸಾರ ಸಾಗರವನ್ನು ಹೊತ್ತು ಈಜಲು ಕಷ್ಟವಾಗುತ್ತಿದೆ. ಒಟ್ಟಿನಲ್ಲಿ ನಿಶಾ ಚಿಕ್ಕಂದಿನಿಂದಲೇ ಕಷ್ಟದ ಜೊತೆಯಾಗಿ ಬೆಳೆದವಳು.
ನಿಶಾ ಕೋಟ ವಿವೇಕ ಬಾಲಕಿಯರ ಹೈಸ್ಕೂಲಿನಲ್ಲಿ ಎಂಟನೇ ಕ್ಲಾಸ್ ವಿದ್ಯಾರ್ಥಿನಿ. ಓದಿನಲ್ಲಿ ಶಾಲೆಗೆ ಮುಂದಿರುವ ಈಕೆ ಯಕ್ಷಗಾನ, ಭರತನಾಟ್ಯದಲ್ಲಿ ಪ್ರವೀಣೆ. ತನ್ನ ತಂಡದ ಜೊತೆ ಅಲ್ಲಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಾಳೆ. ಭರತನಾಟ್ಯ ಕ್ಲಾಸಿಗೆ ತಿಂಗಳಿಗೆ 300 ರೂಪಾಯಿ ಫೀಸ್ ಕೊಡೋದಕ್ಕೂ ಈಕೆಗೆ ಕಷ್ಟವಾಗುತ್ತಿದೆ. ಭರತನಾಟ್ಯ ಕಾರ್ಯಕ್ರಮಗಳಿದ್ದರೆ ನಿಶಾ ಬಳಿ ಸರಿಯಾದ ಕಾಸ್ಟ್ಯೂಮ್‍ಗಳಿಲ್ಲ. ವಿಶೇಷ ದಿನಗಳಲ್ಲಿ ತೊಡಲು ಒಳ್ಳೆಯ ಬಟ್ಟೆಗಳಿಲ್ಲ. ಹೀಗಾಗಿ ಬೆಳಕು ಕಾರ್ಯಕ್ರಮದ ಮೂಲಕ ನಿಶಾ ಸಹಾಯ ಅಪೇಕ್ಷಿಸಿದ್ದಾಳೆ.
ಎಷ್ಟೇ ಬಡತನ ಇದ್ರೂ ಈಕೆಯಲ್ಲಿರುವ ಪ್ರತಿಭೆಗೆ ಕೊರತೆಯಾಗಿಲ್ಲ. ವಿದ್ಯೆಗೆ ಹಣ ಅಡ್ಡಿಯಾಗಿಲ್ಲ. ಇಷ್ಟರವರೆಗೆ ಹೇಗೋ ಆಗಿದೆ. ಮುಂದೆ ಪಿಯೂಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಳ್ಳಬೇಕು. ವರ್ಷಕ್ಕೆ 15 ಸಾವಿರ ರೂಪಾಯಿ ಫೀಸ್ ಕಟ್ಟಬೇಕು. ಎಂಬಿಬಿಎಸ್ ಮಾಡಿ ವೈದ್ಯೆಯಾಗಬೇಕು ಅನ್ನೋ ಕನಸು ಇಟ್ಟುಕೊಂಡಿದ್ದಾಳೆ ನಿಶಾ.