ಗದಗ: ಎದ್ದು ನಿಲ್ಲಲಾಗದಂತಹ ಸ್ಥಿತಿ, ಕಿತ್ತು ತಿನ್ನುವ ಬಡತನ, ವಯಸ್ಸಾದ ತಂದೆ ತಾಯಿ. ಈ ಎಲ್ಲದರ ಮಧ್ಯೆ ನರರೋಗ ಹಾಗೂ ಸಂದು ನೋವು. ಹೌದು ನಾವು ಹೇಳಲು ಹೊರಟಿರುವುದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬರದೂರು ಗ್ರಾಮದ ವಾಸಿ 23 ವರ್ಷದ ಮೌನೇಶ್ ಎಂಬ ಅಸಹಾಯಕ ಯುವಕನ ಕಥೆ.
ಸದಾ ಹುಮ್ಮಸ್ಸಿನಿಂದ ಕೆಲಸ ಮಾಡಿಕೊಳ್ಳುತ್ತಾ, ಹಿರಿಯರಿಗೆ ಗೌರವಿಸುತ್ತಾ, ಓದುತ್ತಾ. ತಂದೆ ತಾಯಿಯನ್ನು ಸಾಕುತ್ತಿದ್ದರು. ಇರುವ ಅಲ್ಪ ಜಮೀನಿನಲ್ಲಿ ಸಣ್ಣ ಬೆಳೆ ಬೆಳದು ಜೀವನ ನಡೆಸುತ್ತಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆ ಆಟವಾಡುವ ವೇಳೆ ಬಿದ್ದು ತೊಡೆ ಭಾಗ ಪೆಟ್ಟಾಗಿತ್ತು. ಗಾಯಾಳುವಾಗಿದ್ದು ಮೌನೇಶ್‍ರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಮೇಲೆ ನರರೋಗ, ಸಂದು ನೋವು ಸಮಸ್ಯೆ ಇದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಕಿತ್ತು ತಿನ್ನುವ ಬಡತನವಿದ್ದರೂ ಸ್ವಾಭಿಮಾನದಿಂದ ಬದುಕುತ್ತಿದ್ದ ಮೌನೇಶ್‍ನ ತಂದೆ ತಾಯಿ ಮಗನಿಗಾಗಿ ಸಾಲ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಮಗನ ಚಿಕಿತ್ಸೆಗಾಗಿ ಹುಬ್ಬಳ್ಳಿ, ಧಾರವಾಡ ಸೇರಿದಂತೆ ಎಲ್ಲ ನಗರಗಳಲ್ಲೂ ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ಮಗನಲ್ಲಿ ಯಾವುದೇ ಚೇತರಿಕೆಯಾಗಿಲ್ಲ.
ವಯಸ್ಸಾದ ತಂದೆ ತಾಯಿಗಳನ್ನು ನಾನು ನೋಡಿಕೊಳ್ಳಬೇಕಾಗಿತ್ತು. ಆದರೆ ನನ್ನನ್ನು ನೋಡಿಕೊಳ್ಳುವದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟಿದ್ದಾರೆ ಎಂದು ಮೌನೇಶ್ ಕೊರಗುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಂದ ಹೊರ ಬರಲು ಹಾಗೂ ತಂದೆ ತಾಯಿಗೆ ಹೊರೆ ಕಡಿಮೆ ಮಾಡಲು ಮೌನೇಶ್ ಆತ್ಮಹತ್ಯೆಗೆ ಯತ್ನಿಸಿದ್ದರು.
ಛಲ ಬಿಡದ ತಂದೆ ತಾಯಿ ಮಗ ಮೌನೇಶ್‍ನನ್ನು ದೊಡ್ಡ ದೊಡ್ಡ ಆಸ್ಪತ್ರೆಗೆಲ್ಲಾ ತೋರಿಸಿದ್ದಾರೆ. ನೋಡಿದ ವೈದ್ಯರಲ್ಲಿ ಕೆಲವರು ಸಾಧ್ಯವಿಲ್ಲ ಎಂದರೆ ಇನ್ನು ಕೆಲವರು ತುಂಬಾ ಹಣ ಖರ್ಚಾಗುತ್ತದೆ ಎಂದು ಹೇಳುತ್ತಾರೆ. ಇದ್ದ ಹಣವನ್ನೆಲ್ಲ ಅಲ್ಲಿ ಇಲ್ಲಿ ಅಂತ ಬರೀ ಔಷಧಿಗೆ ಖರ್ಚಾಗಿದೆ.
ನಿತ್ಯ ಕರ್ಮಕ್ಕೂ ಇನ್ನೊಬ್ಬರನ್ನ ಆಶ್ರಯಿಸಬೇಕಾದ ಅನಿವಾರ್ಯತೆ ಮೌನೇಶನದ್ದು ಜೊತೆಗೆ ವೃದ್ಧ ತಂದೆ-ತಾಯಿ. ಬಡತನ ಈ ಕುಟುಂಬದ ಅಸಹಾಯಕತೆಯನ್ನ ಮತ್ತಷ್ಟು ಹೆಚ್ಚಿಸಿದೆ. ಇನ್ನೂ ಮೌನೇಶನ ನೋವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕುಟುಂಬ ದಿಕ್ಕು ತೋಚದಂತಾಗಿ ಕುಳಿತಿದೆ.
https://www.youtube.com/watch?v=hsSmHabjUhE