ತುಮಕೂರು: ಪ್ರಾಣಿಗಳು ಕೂಡಾ ವಾಸವಿರಲು ಸಾಧ್ಯವಿಲ್ಲದ ಗುಡಿಸಲು. ಮಳೆ ಬಂದರಂತೂ ಜಾಗರಣೆ ಮಾಡದೇ ವಿಧಿ ಇಲ್ಲ. ಒಟ್ಟು ಮೂವರು ಇದೇ ಮನೆಯಲ್ಲಿ ವಾಸಿಸಬೇಕಾದ ದುಃಸ್ಥಿತಿ. ಇದೀಗ ಕುಟುಂಬವೊಂದು ಸಹಾಯ ಕೇಳಿಕೊಂಡು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದೆ.
ಜಿಲ್ಲೆಯ ಕೊರಟಗೆರೆ ಪಟ್ಟಣದ 6 ನೇ ವಾರ್ಡನಲ್ಲಿ ವಾಸವಿರುವ ಲಕ್ಷ್ಮಮ್ಮ ಕುಟುಂಬದ ಕತೆ ಇದಾಗಿದೆ. ಸುಮಾರು 20 ವರ್ಷಗಳಿಂದ ಲಕ್ಷ್ಮಮ್ಮ ಅವರು ತನ್ನಿಬ್ಬರು ಕಿವುಡ-ಮೂಕ ಮಕ್ಕಳೊಂದಿಗೆ ಸಂಸಾರದ ಬಂಡಿ ಎಳೆಯುತ್ತಿದ್ದಾರೆ. ಆಶ್ರಯ ಯೋಜನೆಯಡಿ ಮನೆ ನೀಡಿ, ಸೈಟು ನೀಡಿ ಎಂದು ಅದೆಷ್ಟೋ ಬಾರಿ ಪಟ್ಟಣ ಪಂಚಾಯತಿಗೆ ಅರ್ಜಿ ಹಾಕಿದ್ದರು. ಆದರೂ ಇವರಿಗೆ ಮನೆ ಭಾಗ್ಯ ಸಿಕ್ಕಿಲ್ಲ. ಅಷ್ಟೇ ಅಲ್ಲದೇ ಪಡಿತರ ಚೀಟಿ ಕೂಡಾ ಇವರಿಗೆ ಸಿಕ್ಕಿಲ್ಲ.
Advertisement
Advertisement
ಇಬ್ಬರು ಮಕ್ಕಳೂ ಕಿವುಡ ಮತ್ತು ಮೂಕರಾಗಿದ್ದಾರೆ. ಈ ಇಬ್ಬರಿಗೂ ಸರ್ಕಾರದಿಂದ ನೀಡಬೇಕಿದ್ದ ಅಂಗವಿಕಲ ಭತ್ಯೆ ಕೂಡ ಸಿಗುತ್ತಿಲ್ಲ. ಎಲ್ಲದಕ್ಕೂ ಅಧಿಕಾರಿಗಳು ಸ್ವಂತ ವಿಳಾಸ ಇಲ್ಲ ಎಂದು ಸಬೂಬು ನೀಡುತ್ತಿದ್ದಾರೆ ಎಂದು ನೊಂದ ಮಹಿಳೆ ಲಕ್ಷ್ಮಮ್ಮ ಅವರು ತಿಳಿಸಿದ್ದಾರೆ.
Advertisement
ಲಕ್ಷ್ಮಮ್ಮ ಕೂಲಿನಾಲಿ ಮಾಡಿ ಇಬ್ಬರು ಮಕ್ಕಳನ್ನು ಸಾಕುತ್ತಿದ್ದಾರೆ. ಇಬ್ಬರು ವಿಕಲಾಂಗ ಮಕ್ಕಳು ದೊಡ್ಡವರಾದರೂ ಎಲ್ಲಿಯೂ ಕೆಲಸ ಮಾಡಲು ಹೋಗುತ್ತಿಲ್ಲ. ಮಾನಸಿಕವಾಗಿ ಅಷ್ಟೊಂದು ಪ್ರಭುದ್ಧತೆ ಇಲ್ಲದೆ ಇದ್ದುದರಿಂದ ಯಾರೂ ಇಬ್ಬರು ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಹಾಗಾಗಿ ಸಂಸಾರದ ನೊಗ ವೃದ್ಧೆ ಲಕ್ಷ್ಮಮ್ಮಳ ಮೇಲಿದೆ. ಇನ್ನೂ ಸಂಬಂಧಿಕರ್ಯಾರು ಸಹಾಯಕ್ಕೆ ಬರುತ್ತಿಲ್ಲ ಎಂದು ಪಟ್ಟಣ ಪಂಚಾಯತ್ ಸದಸ್ಯ ನಯಾಜ್ ಹೇಳಿದ್ದಾರೆ.
Advertisement
ಲಭ್ಯವಿರುವ ಎಲ್ಲಾ ಸರ್ಕಾರಿ ಮೂಲಭೂತ ಸೌಲಭ್ಯಗಳಿಗೂ ಲಕ್ಷ್ಮಮ್ಮ ಅಕ್ಷರಷಃ ಅರ್ಹರಿದ್ದರೂ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಅಧಿಕಾರ ಶಾಹಿಯ ಕಣ್ತೆರಸಿ ನಮಗೆ ಬೆಳಕು ಕೊಡಿ ಎಂದು ಈ ಕುಟುಂಬ ಅಂಗಲಾಚುತ್ತಿದೆ.
https://www.youtube.com/watch?v=ryAdxwIMFvI