ಕೋಲಾರ: ಸರ್ಕಾರ ಕೆರೆಗಳ ಅಭಿವದ್ಧಿಗೆಂದು ನೂರಾರು ಕೋಟಿ ವ್ಯಯ ಮಾಡುತ್ತಿದೆ. ಆದರೆ ಕೆಲವು ಕೆರೆಗಳು ಮಾತ್ರ ಸರ್ಕಾರದ ನಿರ್ಲಕ್ಷ್ಯ ಮತ್ತು ಸಾರ್ವಜನಿಕರ ಒತ್ತುವರಿಯಿಂದ ನಶಿಸಿಸುತ್ತಿವೆ. ಇದಕ್ಕೆ ಸಾಕ್ಷಿ ಕೋಲಾರ ತಾಲೂಕು ಹೋಳೂರು ಗ್ರಾಮದ ಐತಿಹಾಸಿಕ ಕೆರೆ.
ನೂರಾರು ವರ್ಷಗಳ ಇತಿಹಾಸ ಇರುವ ಈ ವಿಶಾಲವಾದ ಕೆರೆ ಬರೋಬ್ಬರಿ 350 ಎಕರೆ ವಿಸ್ತೀರ್ಣವನ್ನು ಹೊಂದಿದೆ. ರೈತರ ವ್ಯವಸಾಯಕ್ಕೆ, ಜಾನವಾರುಗಳಿಗೆ ಅನುಕೂಲವಾಗಲೆಂದು ಸರ್ಕಾರವು ಬೃಹತ್ತಾದ ಕೆರೆ ನಿರ್ಮಾಣಕ್ಕೆ 80 ವರ್ಷಗಳ ಹಿಂದೆ ಭೂಸ್ವಾಧೀನ ಪಡಿಸಿಕೊಂಡು ವಾರಸುದಾರರಿಗೆ ಪರಿಹಾರ ಮೊತ್ತವನ್ನು ನೀಡಿ ಕೆರೆ ನಿರ್ಮಾಣ ಮಾಡಲಾಗಿದೆ.
Advertisement
ಗ್ರಾಮದ ದೊಡ್ಡಕೆರೆಯ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳಿಂದ ಕೋಟ್ಯಾಂತರ ರುಪಾಯಿ ಅನುದಾನವನ್ನ ಖರ್ಚು ಮಾಡಿದೆ. ಕಳೆದ 20 ವರ್ಷಗಳಿಂದಲೂ ಹೋಳೂರು ಕೆರೆಯ ಅಂಗಳದಲ್ಲಿ ಗಿಡ-ಮರಗಳನ್ನು ಸಾಮಾಜಿಕ ಅರಣ್ಯ ಇಲಾಖೆ ನೆಟ್ಟು ಪೋಷಣೆ ಮಾಡುತ್ತಿದೆ. ಕೆರೆ ಕಟ್ಟೆಯ ಪುನಶ್ಚೇತನಕ್ಕಾಗಿ ಸಣ್ಣ ನೀರಾವರಿ ಇಲಾಖೆಯು 58 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ.
Advertisement
Advertisement
ವಿಪರ್ಯಾಸ ಅಂದರೆ ಈ ಕೆರೆಯು ಸರ್ಕಾರದ್ದು ಅನ್ನೋದಕ್ಕೆ ಸಾಮಾಜಿಕ ಅರಣ್ಯ ಇಲಾಖೆಯಲ್ಲಾಗಲೀ, ಸಣ್ಣ ನೀರಾವರಿ ಇಲಾಖೆಯಲ್ಲಾಗಲೀ, ಜಿಲ್ಲಾಡಳಿತದ ಬಳಿಯಾಗಲಿ ದಾಖಲೆ ಇಲ್ಲ. ಜಮೀನು ಕೊಟ್ಟ ರೈತರ ಹೆಸರಲ್ಲೆ ಪಹಣಿ ದಾಖಲಾತಿಗಳಿದ್ದು ಈ ಹಳೇ ದಾಖಲಾತಿಗಳಿಂದ ರೈತರು, ಪ್ರಭಾವಿಗಳು, ರಿಯಲ್ ಎಸ್ಟೇಟ್ ಉದ್ಯಮಸ್ಥರು ಕೆರೆ ಜಾಗವನ್ನ ಕಬಳಿಸುತ್ತಿದ್ದಾರೆ.
Advertisement
ಜಿಲ್ಲಾಡಳಿತ ಪ್ರಭಾವಿಗಳಿಗೆ ಮಣಿದು ಕಂಡು ಕಾಣದಂತೆ ಪರೋಕ್ಷವಾಗಿ ಕೆರೆಯನ್ನು ರಿಯಲ್ ಎಸ್ಟೇಟ್ ಉದ್ಯಮಸ್ಥರ ಪಾಲಾಗಲು ಸಹಕರಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಕ್ಷರಶಃ ಬೃಹತ್ತಾದ ಕೆರೆಯು ನಶಿಸಿ ಒಂದು ಸಣ್ಣ ಕೆರೆಯಾಗಿ ಮಳೆ ನೀರು ಹರಿಯದಂತೆ ನೀರು ತುಂಬದಂತೆ ಮಾಡಲಾಗಿದೆ. ಇದರಿಂದಾಗಿ ಇಲ್ಲಿನ ಗ್ರಾಮಸ್ಥರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಅನಾನುಕೂಲ ಹೆಚ್ಚಾಗಿದೆ.
ನೂರಾರು ವರ್ಷಗಳಿದಂಲೂ ಅಸ್ತಿತ್ವದಲ್ಲಿರುವ ಕೆರೆಗೆ ಸೂಕ್ತ ದಾಖಲೆಗಳನ್ನ ಒದಗಿಸಲು ವಿಫಲವಾಗಿರುವ ಕಂದಾಯ ಇಲಾಖೆಯ ಗೊಂದಲ ನಿವಾರಣೆ ಮಾಡಿ, ಅಕ್ರಮ ಒತ್ತುವರಿ ತೆರವುಗೊಳಿಸಿ ಕೆರೆ ಸಂರಕ್ಷಣೆ ಮಾಡಿ ಎಂದು ಗ್ರಾಮಸ್ಥರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.
https://www.youtube.com/watch?v=h1WR3OenCLk