ಹಾಸನ: ಕುಡಿತದ ಚಟಕ್ಕೆ ಬಿದ್ದವರು ಮನ, ಮನೆಯನ್ನು ಮಾರಿಕೊಳ್ಳುವರು ಎಂಬ ಮಾತಿದೆ. ಆ ಮಾತಿಗೆ ಪೂರಕವಂತೆ ಈ ವರದಿ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ಹೌದು ಹಾಸನ ಜಲ್ಲೆ ಶೆಟ್ಟಿ ಹಳ್ಳಿ ಗ್ರಾಮದ ವೃದ್ಧಾಶ್ರಮದಲ್ಲಿರುವ ವೃದ್ಧೆಯ ಕರುಣಾಜನಕ ಕಥೆ ಇದು.
ಹಾಸನದ ನಿವಾಸಿಯಾಗಿರುವ ಜಯಲಕ್ಷ್ಮಮ್ಮ ಆಸ್ತಿ ಪಾಸ್ತಿ ಹೊಂದಿದ್ದ ಐಶ್ವರ್ಯವಂತ, ಗಂಡ ಮತ್ತು ಮಗನೊಂದಿಗೆ ಸುಖ ಸಂಸಾರದ ಜೀವನ ನಡೆಸುತ್ತಿದ್ದರು. ಗಂಡ ತೀರಿಹೋದ ನಂತರ ಮಗನಿಗೆ ಆಸರೆಯಾಗಿದ್ದರು. ಮಗನಿಗೆ ಮದುವೆ ಮಾಡಿ ಮಗ ಮತ್ತು ಸೊಸೆ, ಮೊಮ್ಮಗನೊಂದಿಗೆ ವಾಸ ಮಾಡುತ್ತಿದ್ದರು. ಮಗ ನವೀನ್ ಬರೋಬ್ಬರಿ 40 ಆಟೋಗಳ ಮಾಲೀಕನಾಗಿದ್ದ. ಆದರೆ ಕುಡಿತದ ಚಟಕ್ಕೆ ಬಿದ್ದು ಆಸ್ತಿ ಮನೆಯನ್ನು ಮಾರಿಬಿಟ್ಟ. ಮಗನ ಕುಡಿತದ ಚಟಕ್ಕೆ ಬೇಸತ್ತ ಪತ್ನಿ ಬೆಂಗಳೂರಿನಲ್ಲಿ ರೈಲಿಗೆ ತಲೆಕೊಟ್ಟಿದ್ದಾರೆ.
ಆದರೆ ಮಗ ಎರಡನೇ ಮದ್ವೆಯಾಗಿ ವೃದ್ಧೆ ತಾಯಿಯ ತಾಳಿಯನ್ನು ಕಸಿದುಕೊಂಡು ಕುಡಿತಕ್ಕೆ ಮಾರಿಕೊಂಡು ಬಳಿಕ ಸ್ವತಃ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಮಗನ ಸಾವನ್ನು ಕಂಡು ವೃದ್ಧೆ ಜಯಲಕ್ಷ್ಮಮ್ಮ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಅದೃಷ್ಟವಶಾತ್ ಕೆಲದಿನಗಳ ಕಾಲ ಕೋಮಾದಲ್ಲಿದ್ದು ಮರಳಿ ಪ್ರಜ್ಞೆ ಪಡೆದುಕೊಂಡಿದ್ದಾರೆ. ಮಗನ ಎರಡನೇ ಪತ್ನಿ ಮನೆಯೂ ಸಹ ತವರು ಸೇರಿದ್ದು, ಸದ್ಯ ಅಜ್ಜಿ ಮೊಮ್ಮಗ ಇಬ್ಬರು ಬೀದಿ ಪಾಲಾಗಿದ್ದಾರೆ.
ಸದ್ಯ ಸ್ವಂತ ಇರಲು ಮನೆ ಇಲ್ಲ, ತಿನ್ನಲೂ ಊಟ ಇಲ್ಲದ ಪರಿಸ್ಥಿತಿಯಲ್ಲಿರುವ ಅಜ್ಜಿ ಜಯಲಕ್ಷಮ್ಮ ಸ್ಥಳೀಯರ ಸಹಾಯದಿಂದ ಮೊಮ್ಮಗನಿಗೆ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದರು. 4ನೇ ತರಗತಿಯಲ್ಲಿ ಓದುತ್ತಿದ್ದ ಪ್ರಜ್ವಲ್‍ಗೆ ಪರೀಕ್ಷಾ ಶುಲ್ಕ ಕಟ್ಟಿಲ್ಲವೆಂದು ಶಾಲೆಯವರು ಪರೀಕ್ಷೆಗೆ ಕೂರಿಸದೆ ಹೊರ ಹಾಕಿದ್ದರು. ಇದರಿಂದ ಈಗ ದಾರಿ ಕಾಣದೇ ಕಂಗಾಲಾಗಿರುವ ಅಜ್ಜಿ, ಮೊಮ್ಮಗನನ್ನು ಅನಾಥಾಶ್ರಮವೊಂದಕ್ಕೆ ಸೇರಿಸಿ ತಾನೂ ಕೂಡ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ.
ಇಷ್ಟೆಲ್ಲ ಕಷ್ಟಗಳ ನಡುವೆ ಶಿಕ್ಷಣದ ಮಹತ್ವ ಅರಿತಿರುವ ಈ ಅಜ್ಜಿ ನನಗೆ ಏನೂ ಬೇಡ ನಾನು ಅನಾಥಾಶ್ರಮದಲ್ಲಿ ಜೀವಿಸುತ್ತೇನೆ. ನನ್ನ ಮೊಮ್ಮಗ ಪ್ರಜ್ವಲ್‍ಗೆ ವಿದ್ಯಾಭ್ಯಾಸ ಕೊಡಿಸಿ ಅವನ ಭವಿಷ್ಯ ಪ್ರಜ್ವಲಿಸುವಂತೆ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.